ಜಿಲ್ಲೆ

ಮಳೆನೀರು ತೋಡು.. ಕೊಳಚೆ ನೋಡು...

ಗಬ್ಬು ನಾರುತ್ತಿದೆ ಕಂಚಿಗಾರಗುಳಿ ಕಾಲುವೆ

ಸ್ಥಳೀಯರಿಗೆ ದುರ್ವಾಸನೆಯ ಗೋಳು

ಪ್ರಶಾಂತ ಭಾಗ್ವತ, ಉಡುಪಿ

ನಗರ ಭಾಗದಲ್ಲಿ ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗುವಂತಗಾಲು ಅಲ್ಲಲ್ಲಿ ರಾಜ ಕಾಲುವೆ, ತೋಡುಗಳ ಸೌಲಭ್ಯವೇನೋ ಇದೆ. ಆದರೆ, ಅವುಗಳಲ್ಲೀಗ ವಿವಿಧ ಮನೆಗಳ ಹಾಗೂ ವಸತಿ ಸಮುಚ್ಚಯಗಳ ಮಲಿನ ನೀರು ಹರಿಯತೊಡಗಿದೆ.

ಮಳೆಗಾಲದ ಸಂದರ್ಭದಲ್ಲಿ ಮಾತ್ರ ಅಥವಾ ಕಾಡು ಪ್ರದೇಶದಿಂದ ಹರಿದು ಬರುತ್ತಿದ್ದ ನೀರು ರಾಜಕಾಲುವೆ ಮೂಲಕ ಸಾಗಿ ಸಮುದ್ರ ಸೇರುತ್ತಿತ್ತು. ಆದರೆ, ಉಡುಪಿಯಲ್ಲಿ ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಲ-ಮೂತ್ರವೂ ಸೇರಿದಂತೆ ಶೌಚಗೃಹಗಳ ಹೊಲಸು ನೀರು ತೋಡುಗಳಲ್ಲಿ ಹರಿಯುತ್ತಿದೆ.

ಕೊಳಚೆ ನೀರಿನ ಹರಿವು

ಉಡುಪಿ-ಮಣಿಪಾಲ ಮಾರ್ಗದ ಲಕ್ಷ್ಮೀಂದ್ರ ನಗರ ಸಮೀಪದ ವಿಬುಧಪ್ರಿಯ ನಗರದಲ್ಲಿ ಕಂಚಿಗಾರಗುಳಿ ತೋಡು ಇದೆ. ಇದರಲ್ಲಿ ಕುಂಡೇಕಾಡು ಮಾರ್ಗದಿಂದ ಮಳೆನೀರು ಹರಿದು ಸಗ್ರಿ, ಲಕ್ಷ್ಮೀಂದ್ರ ಮೂಲಕ ಮುಂದೆ ಸಾಗಿ ಇಂದ್ರಾಳಿ ತೀರ್ಥ ಕೆರೆಗೆ ಸಂಪರ್ಕಗೊಂಡು ಸಮುದ್ರ ಸೇರುತ್ತಿತ್ತು. ಇದೀಗ ಮಣಿಪಾಲ ಪರಿಸರ ಸೇರಿದಂತೆ ಉಡುಪಿ ನಗರದಲ್ಲಿರುವ ಕೆಲ ಮನೆ ಹಾಗೂ ವಸತಿ ಸಮುಚ್ಚಯಗಳ ಶೌಚಗೃಹದ ಕೊಳಚೆ ನೀರು ಹರಿಯುತ್ತಿದೆ.

ಸ್ಥಳೀಯರ ಗೋಳು

ವಿಭುದಪ್ರಿಯ ನಗರದಲ್ಲಿರುವ ಕಾಮಾಕ್ಷಿ ಮಂದಿರ ಹಾಗೂ ನಾಗಬನದ ಗೋಡೆಗೆ ತಾಗಿಯೇ ಹಿಂಬದಿಯಲ್ಲಿ ಕಂಚಿಗಾರಗುಳಿ ತೋಡು ಇದೆ. ಹಲವಾರು ಮನೆ ಹಾಗೂ ಅನೇಕ ವಸತಿ ಸಮುಚ್ಚಯಗಳ ಶೌಚಗೃಹಗಳ ನೀರನ್ನು ಪೈಪ್​ ಮೂಲಕ ಇದೇ ತೋಡಿಗೆ ನೇರವಾಗಿ ಬಿಡುತ್ತಿದ್ದಾರೆ. ಎಡ-ಬಲಗಳಲ್ಲಿರುವ ಮನೆಯವರು ಗಬ್ಬು ವಾಸನೆಯಿಂದ ಹಿಂಸೆ ಪಡುವಂತಾಗಿದೆ. ಅನ್ಯರ ಮನೆಗಳ ಕೊಳಕು ನೀರಿನ ದುರ್ನಾತದಿಂದ, ವಿಪರೀತ ಸೊಳ್ಳೆ ಕಾಟದಿಂದ ಪರದಾಡುವಂತಾಗಿದೆ.

ನಗರಸಭೆಯ ಮುಂದೆ ಪ್ರತಿಭಟಿಸುವ ಎಚ್ಚರಿಕೆ

ಮೂರ್ನಾಲ್ಕು ವರ್ಷದಿಂದ ಜನರಿಗೆ ಆಗುತ್ತಿರುವ ಸಮಸ್ಯೆ, ತೊಂದರೆ ಕುರಿತು ನಗರಸಭೆಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ತೋಡುಗಳಿಗೆ ಶೌಚಾಲಯ ನೀರು ಬಿಡುವವರಿಗೆ ನಾವು ನೋಟಿಸ್​ ನೀಡಿದ್ದೇವೆ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಾರೆ. ನೋಟಿಸ್​ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆಯೇ? ನಮಗಿನ್ನು ತಾಳ್ಮೆಯಿಂದ ಇರಲಾಗದು. ವಿಜಯವಾಣಿ ಮೂಲಕ ಕೊನೆಯದಾಗಿ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಇಲ್ಲಿನ ನಿವಾಸಿಗಳೆಲ್ಲರೂ ಸೇರಿ ನಗರಸಭೆಯ ಮುಂದೆ ಪ್ರತಿಭಟಿಸುತ್ತೇವೆ ಎಂದು ಸ್ಥಳೀಯ ನಿವಾಸಿ ಸುರೇಶಕುಮಾರ ಎಚ್ಚರಿಕೆ ನೀಡಿದ್ದಾರೆ.

ಈ ಭಾಗದಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಬಾವಿಯ ನೀರೂ ಕಲುಷಿತವಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಜನರ ಆರೋಗ್ಯವೂ ಹದಗೆಡಲಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು. | ಸುರೇಶ ನಾಯಕ. ವಿ.ಪಿ. ನಗರ ನಿವಾಸಿ ತೋಡುಗಳಿಗೆ ಕಾಂಕ್ರೀಟ್​ ಹಾಕಿ ಸ್ವೀಪೇಜ್​ ತಡೆಯಬೇಕು. ಮುಖ್ಯವಾಗಿ ರಾಜಕಾಲುವೆ ಅಥವಾ ತೋಡುಗಳಿಗೆ ಶೌಚಗೃಹದ ಕೊಳಕು ನೀರು ಬಿಡುವುದನ್ನು ಅಧಿಕಾರಿಗಳು ತಡೆಹಿಡಿಯಬೇಕು. ಶಾಸಕ ಯಶ್​ಪಾಲ್​ ಸುವರ್ಣ ಅವರಿಗೂ ಮನವಿ ನೀಡಿದ್ದೇವೆ. ಯಾರೂ ಕ್ರಮ ವಹಿಸುತ್ತಿಲ್ಲ. | ಸುರೇಂದ್ರ ಶ್ಯಾನಭೋಗ. ಸ್ಥಳೀಯ ಹಿರಿಯ ನಿವಾಸಿ ಮಣಿಪಾಲ ಪರಿಸರದಲ್ಲಿರುವ ಎಲ್ಲ ಮನೆ, ವಸತಿ ಸಮುಚ್ಚಯಗಳಿಗೆ ಈಗಾಗಲೇ ಎರಡು ಬಾರಿ ನೋಟಿಸ್​ ನೀಡಲಾಗಿದೆ. ಅಲ್ಲದೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಮಾಹಿತಿ ನೀಡಲಾಗಿದೆ. ಯಾರು ಕೊಳಚೆ ನೀರು ಬಿಡುತ್ತಾರೋ ಅವರಿಗೆ ವಿದ್ಯುತ್​ ಹಾಗೂ ಕುಡಿಯುವ ನೀರು ಸೌಲಭ್ಯ ಕಡಿತ ಮಾಡುವಂತೆಯೂ ನಗರಸಭೆಯ ಇಂಜನಿಯರಿಂಗ್​ ವಿಭಾಗಕ್ಕೂ ಸೂಚಿಸಲಾಗಿದೆ. | ಸ್ನೇಹಾ ಕೆ.ಎಸ್​. ಪರಿಸರ ಅಭಿಯಂತೆ, ಉಡುಪಿ ನಗರಸಭೆ