ಜಿಲ್ಲೆ

ಚರಂಡಿ ಪಾಲಾದ ಮೀನುಗಳು

ವೀರೇಶ ಸೌದ್ರಿ

ನರಗುಂದ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಐತಿಹಾಸಿಕ ಪಡುವಗೊಂಡನ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ. ಪರಿಣಾಮ ಕೆರೆಯಲ್ಲಿ ಸಾಕಣೆ ಮಾಡಿದ್ದ ಸಾವಿರಾರು ಮೀನುಗಳು ಚರಂಡಿ, ಸಾರ್ವಜನಿಕರ ಪಾಲಾದ ಘಟನೆ ಭಾನುವಾರ ನಡೆದಿದೆ.

ಪಟ್ಟಣದ ವಿಠ್ಠಲ ಮುಧೋಳೆ ಎಂಬುವರು 2023ರಲ್ಲಿ ಅಂದಾಜು 8 ಎಕರೆ ವಿಸ್ತೀರ್ಣದಲ್ಲಿರುವ ದಂಡಾಪೂರ ಪಡುವಗೊಂಡನ ಕೆರೆ, ಸೋಮಾಪೂರ ಕೆರೆ ಹಾಗೂ ತುರುಂಭಾವಿ (ಬಸವಣ್ಣ) ಕೆರೆಗಳನ್ನು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು ವಿವಿಧ ಜಾತಿಯ 40 ಸಾವಿರ ಮೀನು ಸಾಕಣೆ ಮಾಡಿದ್ದರು. ಪ್ರತಿ ತಿಂಗಳು 6 ಸಾವಿರದಂತೆ ಎರಡೂವರೆ ವರ್ಷದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಪಟ್ಟಣದಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಮಳೆಗೆ ಗುಡ್ಡದ ಇಳಿಜಾರು ಪ್ರದೇಶದಲ್ಲಿರುವ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಪರಿಣಾಮ ತಾಲೂಕು ಕ್ರೀಡಾಂಗಣ ಪಕ್ಕದಲ್ಲಿ ಕೊಡಿ ಬಿದ್ದು ನೀರಿನ ಜತೆಗೆ ಮೀನುಗಳು ಚರಂಡಿ ಪಾಲಾಗಿವೆ. ಸಿಕ್ಕಿದ್ದೆ ಅವಕಾಶ ಎಂಬಂತೆ ನಾಗರಿಕರು ಮೀನುಗಳನ್ನು ಹಿಡಿದು ಮನೆಗೆ ಕೊಂಡೊಯ್ದಿದ್ದಾರೆ.

ನರಗುಂದದ ಪಡುವಗೊಂಡನ ಕೆರೆಯಲ್ಲಿ ಎರಡೂವರೆ ವರ್ಷದಿಂದ ಮೀನು ಸಾಕಣೆ ಮಾಡಲಾಗಿತ್ತು. ಶ್ರಾವಣ ಮಾಸ, ಗಣೇಶ ಚತುರ್ಥಿ ಪ್ರಯುಕ್ತ ಮಾರಾಟ ಮಾಡಿರಲಿಲ್ಲ. ಅಂದಾಜು 2 ಕೆಜಿಗಿಂತ ಹೆಚ್ಚು ತೂಕ ಹೊಂದಿದ್ದ ಮೀನುಗಳನ್ನು ಶ್ರಾವಣದ ಬಳಿಕ ಮಾರಾಟ ಮಾಡಿದರೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದರೆ, ವಿಪರೀತ ಮಳೆಯಿಂದ ಕೆರೆಗೆ ಕೊಡಿ ಬಿದ್ದು ಶೇ.60 ರಷ್ಟು ಮೀನುಗಳು ಚರಂಡಿ, ಸಾರ್ವಜನಿಕರ ಪಾಲಾಗಿವೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ವಿಠ್ಠಲ ಮುಧೋಳೆ, ಮೀನು ಸಾಕಣೆದಾರ