ಕೊಳ್ಳೇಗಾಲ ಪಟ್ಟಣದಲ್ಲಿರುವ ಪರಿಶಿಷ್ಟ ಪಂಗಡದ ರುದ್ರಭೂಮಿಯಲ್ಲಿ ಮಳೆ ನೀರು ನಿಂತಿರುವುದು.  
ಜಿಲ್ಲೆ

ರುದ್ರಭೂಮಿಯಲ್ಲಿ ಕೊಳಚೆ ನೀರು ಸಂಗ್ರಹ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯ ಉಪ್ಪಾರಮೋಳೆ ಬಡಾವಣೆ ಸಮೀಪ ಚರಂಡಿ ಭರ್ತಿಯಾದ ಪರಿಣಾಮ ಕೊಳಚೆ ನೀರು ಪರಿಶಿಷ್ಟ ಪಂಗಡದ ರುದ್ರಭೂಮಿಯತ್ತ ಬಂದಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಮೋಳೆ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ 50 ಲಕ್ಷ ರೂ. ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಾಗೂ 30 ಲಕ್ಷ ರೂ. ವೆಚ್ಚದಲ್ಲಿ ಬಡಾವಣೆಯಲ್ಲಿನ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಬಡಾವಣೆಯ ಮುಂಭಾಗದಲ್ಲಿರುವ ಪರಿಶಿಷ್ಟ ಪಂಗಡದ ರುದ್ರಭೂಮಿಗೆ ಹೊಂದಿಕೊಂಡಂತೆ ಚರಂಡಿಯನ್ನು ನಿರ್ಮಾಣ ಮಾಡದೆ ಕಾಮಗಾರಿ ಬಾಕಿ ಇದ್ದುದ್ದರಿಂದ ಕೊಳಚೆ ನೀರು ರುದ್ರಭೂಮಿಯಲ್ಲಿ ಶೇಖರಣೆಯಾಗುತ್ತಿದ್ದು, ಯಾರಾದರೂ ಈ ಸಮಯದಲ್ಲಿ ಮೃತಪಟ್ಟರೆ ಅಂತ್ಯಕ್ರಿಯೆ ಮಾಡಲು ಪರದಾಡಬೇಕಾಗಿದೆ.

ರಸ್ತೆ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದಿದ್ದರೂ ಪರಿಶಿಷ್ಟ ಪಂಗಡದ ರುದ್ರಭೂಮಿಯ ಬಳಿ ಸುಮಾರು 100 ಮೀಟರ್ ಚರಂಡಿ ಕಾಮಗಾರಿ ಮಾಡದಿರುವುದರಿಂದ ಬಡಾವಣೆಯಿಂದ ಬರುವ ಕೊಳಚೆ ನೀರು ರುದ್ರಭೂಮಿಯತ್ತ ನುಗ್ಗುತ್ತಿದೆ. ಪೌರಾಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಉಳಿದ 100 ಮೀಟರ್ ಚರಂಡಿ ಕಾಮಗಾರಿಯನ್ನು ಮಾಡಿಕೊಡಿ ಎಂದು ಹಲವಾರು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ನಗರಸಭೆ ಸದಸ್ಯ ಧರಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಗೆ ಕೊಳಚೆ ನೀರು: ಬುಧವಾರ ಸುರಿದ ಜೋರು ಮಳೆಯಿಂದ ಉಪ್ಪಾರ ಮೋಳೆ ಬಡಾವಣೆಯ ಮಹ ದೇವಶೆಟ್ಡಿ, ಜಯಣ್ಣ, ಸಿದ್ದಪ್ಪಸ್ವಾಮಿ, ವಸಂತ್ ಕುಮಾರ್ ಮತ್ತು ಮಹದೇವ ಅವರ ಮನೆಗಳಿಗೆ ಕೊಳಚೆ ನುಗ್ಗಿ ಅವಾಂತರ ಸೃಷ್ಟಿಸಿದ್ದು ನಿವಾಸಿಗಳು ಪರದಾಡುವಂತಾಗಿತ್ತು.