ಗುಂಡ್ಲುಪೇಟೆ: ಕಳೆದ ಬಾರಿ ಕ್ವಿಂಟಾಲ್‌ಗೆ 6 ಸಾವಿರ ರೂ.ಗೆ ಏರಿಕೆ ಕಂಡಿದ್ದ ಹುರುಳಿ ಬೆಲೆ ಈ ಬಾರಿ 4 ಸಾವಿರ ರೂ. ಗಡಿ ದಾಟದೆ ಬೆಳೆಗಾರರಿಗೆ ತೀವ್ರ ನಷ್ಟವುಂಟು ಮಾಡಿದೆ.
ಕಳೆದ ವಾರ ಕ್ವಿಂಟಾಲ್‌ಗೆ 4.4 ಸಾವಿರ ರೂ. ತನಕ ಇದ್ದ ಹುರುಳಿ ಈ ಬಾರಿ ನೆರೆಯ ಆಂಧ್ರಪ್ರದೇಶದಿಂದ ಮಾಲು ಬಂದ ಪರಿಣಾಮ 4.1 ಸಾವಿರ ರೂ.ಗೆ ಕುಸಿಯುವ ಮೂಲಕ ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ.
ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬೆಳೆ ಬೆಳೆಯಲಾಗುತ್ತಿದೆ. ಹಿಂಗಾರು ಮಳೆಯಾಶ್ರಯದಲ್ಲಿ ಬೆಳೆಯುವ ಹುರುಳಿಯನ್ನು ಯಾವುದೇ ಖರ್ಚಿಲ್ಲದೆ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉಳುಮೆ, ಕಟಾವು, ಒಕ್ಕಣೆ ಮುಂತಾದ ಎಲ್ಲ ಕೆಲಸಗಳಿಗೂ ಕಾರ್ಮಿಕರ ಕೂಲಿ ಹೆಚ್ಚಾಗಿರುವುದರಿಂದ ವಿಪರೀತ ಖರ್ಚಾಗುತ್ತಿದೆ. ಪ್ರತಿ ಎಕರೆ ಹುರುಳಿ ಬೆಳೆಯಲು ಟ್ರ್ಯಾಕ್ಟರ್ ಹಾಗೂ ಬಿತ್ತನೆ ಸೇರಿ 20 ಸಾವಿರ ರೂ., ಕಟಾವಿಗೆ 10- ರಿಂದ 15 ಸಾವಿರ ರೂ. ಖರ್ಚಾಗುತ್ತಿದೆ. ಒಳ್ಳೆಯ ಇಳುವರಿ ಬಂದರೆ ಒಂದು ಎಕರೆಗೆ 5 ರಿಂದ 10 ಕ್ವಿಂಟಾಲ್ ಬೆಳೆ ಬೆಳೆಯಬಹುದು. ಇದು ಪ್ರದೇಶವಾರು ಏರುಪೇರಾಗುತ್ತಿದ್ದರೂ ಕಾರ್ಮಿಕರ ಕೂಲಿ ಹಾಗೂ ಒಕ್ಕಣೆ ವೆಚ್ಚ ಒಂದೇ ಆಗಿರುವುದರಿಂದ ಪ್ರತಿ ಎಕರೆಗೆ 25 ಸಾವಿರ ರೂ. ವೆಚ್ಚವಾಗುತ್ತಿದೆ.
ಆದರೆ ಸದ್ಯದ ದರದಲ್ಲಿ ಎಲ್ಲ ಬೆಳೆಗಳನ್ನು ಮಾರಾಟ ಮಾಡಿದರೂ ಬೆಳೆ ಬೆಳೆಯಲು ಮಾಡಿದ ಖರ್ಚು ಕೈಗೆ ಸಿಗದಂತಾಗಿ ನಷ್ಟ ಅನುಭವಿಸುವಂತಾಗಿದೆ. ಇನ್ನಾದರೂ ಸರ್ಕಾರ ಹುರುಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸುವ ಮೂಲಕ ನೆರವಾಗಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಶಿವರಾತ್ರಿ ಎಫೆಕ್ಟ್, ಬೆಲ್ಲದ ಬೆಲೆ ಏರಿಕೆಯಾಗಿದೆ. ಕಳೆದ ವಾರದ ಸಂತೆಯಲ್ಲಿ ಕ್ವಿಂಟಾಲ್‌ಗೆ 4.5 ಸಾವಿರ ರೂ. ಇದ್ದ ಬೆಲೆ ಗುರುವಾರ 5 ಸಾವಿರ ರೂ.ಗೆ ಏರಿದೆ. ಇದರಿಂದ ಹಬ್ಬದ ಆಚರಣೆ ಶ್ರೀಸಾಮಾನ್ಯರ ಕೈ ಸುಡಲಿದೆ.