ಬೀದರ್: ಇಂದು ಶಿಕ್ಷಕರ ದಿನಾಚರಣೆ, ಜಾಗತಿಕವಾಗಿ ಆವರಿಸಿರುವ ಕರೊನಾ ಸವಾಲಿನಲ್ಲೂ ಮಕ್ಕಳಿಗೆ ಆನ್ಲೈನ್ ಮತ್ತು ಇತರ ದೂರಸಂಪರ್ಕ ವಿಧಾನಗಳಿಂದ ಶಿಕ್ಷಣ ನೀಡುವ ಮಹತ್ಕಾರ್ಯವನ್ನು ನಮ್ಮ ಶಿಕ್ಷಕರು ಮಾಡುತ್ತಿದ್ದಾರೆ. ಈಗಷ್ಟೆ, ಹಲವು ಇಯತ್ತೆಗಳಿಗೆ ಭೌತಿಕ ತರಗತಿಗಳೂ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಶಿಕ್ಷಕರ ನೇರ ಬೋಧನೆಯ ಪ್ರಯೋಜನ ಪಡೆಯುವಂತಾಗುತ್ತಿದೆ.
ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ದಿನಾಚರಣೆ ಕಳೆಗಟ್ಟಿಲ್ಲ. ಹಲವು ಶಿಕ್ಷಕರ ಕುಟುಂಬಗಳಿಗೆ ಸಂಭ್ರಮ ಇಲ್ಲವೇ ಇಲ್ಲ. ಏಕೆಂದರೆ ಈ ಭಾಗದ 210 ಶಿಕ್ಷಕರನ್ನು ಮಹಾಮಾರಿ ಕರೊನಾ ಬಲಿ ಪಡೆದಿದೆ. ಬೀದರ್ನಲ್ಲಿ 64, ಕಲಬುರ್ಗಿಯಲ್ಲಿ 47, ಯಾದಗಿರಿಯಲ್ಲಿ 19, ಬಳ್ಳಾರಿಯಲ್ಲಿ 45. ರಾಯಚೂರಿನಲ್ಲಿ 17 ಮತ್ತು ಕೊಪ್ಪಳದಲ್ಲಿ 18 ಜನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಕರೊನಾ ಹೊಡೆತಕ್ಕೆ ಸಾವಪ್ಪಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದ ಚುನಾವಣೆಗಳು ಹಾಗೂ ಸಭೆ ಸಮಾರಂಭಗಳ ಅವಾಂತರಕ್ಕೆ 210 ಶಿಕ್ಷಕರು ಬಲಿಯಾಗಿದ್ದಾರೆ. ಇದರಿಂದ ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದಷ್ಟು ನಷ್ಟವಾಗಿದೆ ಎನ್ನುತ್ತಿದ್ದಾರೆ, ಶಿಕ್ಷಣ ಪ್ರೇಮಿಗಳು. ವಿದ್ಯಾರ್ಥಿಗಳು ದಿವಂಗತರಾದ ತಮ್ಮ ನೆಚ್ಚಿನ ಶಿಕ್ಷಕರನ್ನೂ ನೆನಪಿಸಿಕೊಂಡು ನಮನ ಸಲ್ಲಿಸುತ್ತಿದ್ದಾರೆ.