ಜಿಲ್ಲೆ

ಏಳನೇ ತರಗತಿ ಪರೀಕ್ಷೆ ಮಾರ್ಗಸೂಚಿ ಬಿಡುಗಡೆ; ತರಗತಿ ಹಂತದಲ್ಲೇ ಪರೀಕ್ಷೆ

lakshmihegde

ಬೆಂಗಳೂರು: 2020ನೇ ಸಾಲಿನಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನಡೆಸಲಿರುವ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯ ರೂಪುರೇಷೆ ಮತ್ತು ಮಾರ್ಗಸೂಚಿಗಳನ್ನು ಶಿಕ್ಷಣ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಪರೀಕ್ಷೆಗೆ ತಗಲುವ ವೆಚ್ಚ 6.40 ಕೋಟಿ ರೂ.ಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದ ಪಡೆಯಲು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿಗೆ ಸೂಚನೆ ನೀಡಿದೆ.

7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿ ರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ಮೌಲ್ಯಾಂಕನ ಪರೀಕ್ಷೆ ಹೇಗಿರಬೇಕು ಎಂಬುದರ ಕುರಿತು ಎಂಟು ಷರತ್ತು ವಿಧಿಸಿದೆ.

ಶಾಲಾ ಹಂತದಲ್ಲೇ ಮೌಲ್ಯಮಾಪನ: ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನವನ್ನು ಶಾಲಾ ಹಂತದಲ್ಲೇ ನಡೆಸಲು ಇಲಾಖೆ ನಿರ್ಧರಿಸಿದೆ. ಪರೀಕ್ಷೆಯ ನಂತರ ಮೌಲ್ಯಮಾಪನವನ್ನು ಡಯಟ್ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿ ರಿಪೋರ್ಟ್ ಕಾರ್ಡ್ ಸಿದ್ಧಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದು ಒಂದು ತಿಂಗಳ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ತಿಳಿಸಿದ್ದರು. ಇದೀಗ ಶಾಲಾ ಹಂತದಲ್ಲೇ ನಡೆಸುತ್ತೇವೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಷರತ್ತುಗಳೇನು?
  1. 7ನೇ ತರಗತಿ ಸಾಮಾನ್ಯ ಮೌಲ್ಯಾಂಕನ ವನ್ನು ಶಾಲಾ ಆವರಣದಲ್ಲೇ ಇತರೆ ತರಗತಿಗಳ ಪರೀಕ್ಷೆಗಳಂತೆ ನಡೆಸುವುದು. 
  2. ಪ್ರಸ್ತುತ ಶಾಲೆಗಳಲ್ಲಿ ನಡೆಸಬೇಕಾದ ಸಂಕಲನಾತ್ಮಕ ಮೌಲ್ಯಮಾಪನ-2ರ ಬದಲು ನಡೆಸುವ ಮೌಲ್ಯಾಂಕನ ಇದಾಗಿರುತ್ತದೆ.
  3. ಪ್ರಶ್ನೆಪತ್ರಿಕೆಯನ್ನು ದ್ವಿತೀಯ ಸೆಮಿಸ್ಟರ್ ಪಠ್ಯ ಆಧರಿಸಿ 40 ಅಂಕಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಲಿಖಿತ ಪದ್ಧತಿಯಲ್ಲಿ ನಡೆಸುವುದು.
  4. ಸಾಮಾನ್ಯ ಮೌಲ್ಯಾಂಕನ ಪ್ರಕ್ರಿಯೆಯನ್ನು ಬಾಹ್ಯ ಮೂಲದ ಪರಿವೀಕ್ಷಣೆಯಲ್ಲಿ ನಿರ್ವಹಿಸದೆ ಅದೇ ಶಾಲೆಯ ಶಿಕ್ಷಕರ ಮೂಲಕ ನಿರ್ವಹಿಸುವುದು.
  5. ಸಂಕಲನಾತ್ಮಕ ಮೌಲ್ಯಮಾಪನ-2ಕ್ಕೆ ಸಂಬಂಧಿಸಿದ ಪ್ರಶ್ನೋತ್ತರ ಪತ್ರಿಕೆಯನ್ನು ಕರ್ನಾಟಕ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಸಿದ್ಧಪಡಿಸಿ ವಿತರಿಸಲಿದೆ.
  6. 2019-20ನೇ ಸಾಲಿಗೆ ಈ ಪ್ರಶ್ನೋತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿ ನಡೆಸುವುದು.
  7. ಫಲಿತಾಂಶದ ವಿವರವನ್ನು ಮುಖ್ಯಶಿಕ್ಷಕರು ನಿಗದಿತ ಅವಧಿಯಲ್ಲಿ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ(ಎಸ್​ಎಟಿಎಸ್)ಯಲ್ಲಿ ಭರ್ತಿ ಮಾಡಬೇಕು.