ಮಂಜುನಾಥ ತಿಮ್ಮಯ್ಯ ಮೈಸೂರು
ಹಣಕಾಸು ಮುಗ್ಗಟ್ಟಿನಿಂದಾಗಿ ಮೈಸೂರು ವಿಶ್ವವಿದ್ಯಾಲಯದ 7 ಅಧ್ಯಯನ ಪೀಠಗಳು ಸ್ಥಗಿತಗೊಂಡಿವೆ. ಉಳಿದ ಅಧ್ಯಯನ ಪೀಠಗಳು ಮತ್ತು ಕೇಂದ್ರಗಳು ಕುಂಟುತ್ತ ಸಾಗಿವೆ…!
ಮೈವಿವಿಯಲ್ಲಿ 26 ಅಧ್ಯಯನ ಪೀಠಗಳಿವೆ. ಇದರಲ್ಲಿ 19 ಚಾಲ್ತಿಯಲ್ಲಿದ್ದು, ಉಳಿದ 7 ಪೀಠಗಳು ಕಣ್ಣು ಮುಚ್ಚಿವೆ. ವ್ಯಕ್ತಿ, ಜಾತಿ ಧರ್ಮ ಮತ್ತು ಇನ್ನಿತರ ಸಾಮಾಜಿಕ, ಆರ್ಥಿಕವಾಗಿ ಪ್ರಾಮುಖ್ಯತೆಯನ್ನು ಒಳಗೊಂಡಿರುವ ವಿಷಯಗಳ ಮೇಲೆ ತಜ್ಞರಿಂದ ಆಳವಾದ ಸಂಶೋಧನೆ, ಅಧ್ಯಯನ ಮತ್ತು ದಾಖಲೀಕರಣಕ್ಕೆ ಸಹಾಯ ಮಾಡುವ ಈ ಅಧ್ಯಯನ ಪೀಠಗಳು ಅನುದಾನ ಕೊರತೆಯಿಂದ ತೆವಳುತ್ತಿರುವುದಕ್ಕೆ ಇದುವೇ ಸ್ಪಷ್ಟ ನಿದರ್ಶನ.
ಅಧ್ಯಯನ ಪೀಠಗಳು ಮೈಸೂರು ವಿವಿ, ರಾಜ್ಯ ಸರ್ಕಾರ, ಸೊಸೈಟಿ, ಬ್ಯಾಂಕ್‌ಗಳು, ಕೇಂದ್ರ ಸರ್ಕಾರದ ಸಂಸ್ಥೆಗಳ ಆರ್ಥಿಕ ನೆರವಿನಿಂದ ನಡೆಯುತ್ತವೆ. ಅದಕ್ಕಾಗಿ ಈ ಸಂಸ್ಥೆಗಳು ಒಂದು ಬಾರಿ ಇಡುಗಂಟವನ್ನು ಪೀಠದಲ್ಲಿ ಇಟ್ಟಿವೆ. ಅದರಿಂದ ಬರುವ ಬಡ್ಡಿಯನ್ನು ಬಳಸಿ ಪೀಠಕ್ಕೆ ಬೇಕಾಗುವ ವಿಷಯದ ತಜ್ಞರ ಆಯ್ಕೆಯನ್ನು ತಾತ್ಕಾಲಿಕವಾಗಿ ಅಥವಾ ಒಂದು ವರ್ಷದ ಅವಧಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಆಹ್ವಾನಿಸಲಾಗುತ್ತಿದೆ. ಉದ್ದೇಶಿತ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತದೆ. ಖರ್ಚು-ವೆಚ್ಚವನ್ನು ಕಳೆದು ಉಳಿಕೆ ಮೊತ್ತವನ್ನು ಮೂಲ ನಿಧಿಗೆ ಜಮಾ ಮಾಡಲಾಗುತ್ತದೆ.
ಬಂದ್ ಆಗಿರುವ ಅಧ್ಯಯನ ಪೀಠಗಳಿಗೆ ಮೈಸೂರು ವಿಶ್ವವಿದ್ಯಾಲಯವೇ ಅನುದಾನ ನೀಡುವ ಅನುದಾನ ಸಂಸ್ಥೆಯಾಗಿದೆ ಎಂಬುದೇ ಅಚ್ಚರಿ. ಇವುಗಳೇ ಕನಿಷ್ಠ ಮೊತ್ತವನ್ನು ನೀಡಲಾಗುತ್ತಿತ್ತು ಎಂಬುದು ಮತ್ತೊಂದು ವಿಶೇಷ. 76 ಸಾವಿರ ರೂಪಾಯಿಂದ 4.70 ಲಕ್ಷ ರೂ. ಒಳಗೆ ಅನುದಾನ ದೊರೆಯಿತಿತ್ತು. ಇದು ಆರ್ಥಿಕ ಸಂಕಷ್ಟದಲ್ಲಿರುವ ಮೈವಿವಿವು ಅಧ್ಯಯನ ಪೀಠಗಳನ್ನು ಮುಂದುವರಿಸಿಕೊಂಡು ಹೋಗಲಾರದಂತೆ ದುಸ್ಥಿತಿಗೆ ತಲುಪಿದೆ.
ಸರ್ ಎಂ.ವಿಶ್ವೇಶ್ವರಯ್ಯ, ಕುವೆಂಪು ಕಾವ್ಯಾಧ್ಯಯನ, ಸ್ವಾಮಿ ವಿವೇಕಾನಂದ, ಡಾ.ಜಾಕೀರ್ ಹುಸೇನ್ ಪೀಠ, ಡಾ.ಬಿ.ಆರ್.ಅಂಬೇಡ್ಕರ್ ಪೀಠ ಸೇರಿದಂತೆ 6 ಅಧ್ಯಯನ ಪೀಠಗಳು ಈಗಲೂ ಮೈಸೂರು ವಿವಿ ಅನುದಾನದಿಂದ ನಡೆಯುತ್ತಿವೆ. ಗುಬ್ಬಿ ವೀರಣ್ಣ ರಂಗ ಪೀಠ ಮಾತ್ರ ರಾಜ್ಯ ಸರ್ಕಾರ ಮತ್ತು ಮೈವಿವಿ ವತಿಯಿಂದ ಮುನ್ನಡೆಯುತ್ತಿದೆ. ರಾಜ್ಯ ಸರ್ಕಾರದ ಅನುದಾನದಿಂದ ನಾಲ್ವಡಿ ಕೃಷ್ಣರಾಜ ಪಡೆಯರ್ ದತ್ತಿ, ಡಿ.ದೇವರಾಜ ಅರಸ್, ಟಿಪ್ಪು ಸುಲ್ತಾನ್ ಪೀಠ, ಬಸವೇಶ್ವರ ಕೇಂದ್ರ, ಡಾ.ಪಿ.ಆರ್.ತಿಪ್ಪೇಸ್ವಾಮಿ, ಎನ್.ರಾಚಯ್ಯ, ಡಾ.ಯು.ಆರ್.ಅನಂತಮೂರ್ತಿ, ಮಂಟೆಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಪೀಠಗಳು ಕಾರ್ಯನಿರ್ವಹಿಸುತ್ತಿವೆ.
ಪೀಠಗಳು ಬೋಧನೆ, ಸಾಂಸ್ಥಿಕ ನಾಯಕತ್ವದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡುತ್ತವೆ. ನಿರ್ದಿಷ್ಟ ಕ್ಷೇತ್ರಗಳು ಅಥವಾ ವಿಭಾಗಗಳಲ್ಲಿ ಸಂಶೋಧನಾ ಶ್ರೇಷ್ಠತೆಯನ್ನು ಬೆಂಬಲಿಸಲು ಈ ಪೀಠಗಳನ್ನು ಸ್ಥಾಪಿಸಲಾಗಿದೆ. ಜತೆಗೆ, ಉನ್ನತ ಅಧ್ಯಾಪಕ ಪ್ರತಿಭೆಯನ್ನು ವಿಶ್ವವಿದ್ಯಾಲಯಕ್ಕೆ ಆಕರ್ಷಿಸಲು ಸಹಾಯ ಮಾಡುತ್ತವೆ. ಸಂಶೋಧನೆ, ಬೋಧನೆ, ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಸ್ಥಿರವಾದ ಬೆಂಬಲ ಒದಗಿಸುತ್ತವೆ. ಸಮಾಜದಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಚಟುವಟಿಕೆಗಳಲ್ಲೂ ಇವುಗಳು ತೊಡಗಿಸಿಕೊಳ್ಳುತ್ತವೆ. ಇಂತಹ ಉದ್ದೇಶ ಹೊಂದಿರುವ ಪೀಠಗಳು ಸ್ಥಗಿತಗೊಂಡಿರುವುದು ಕಳವಳಕಾರಿ ಸಂಗತಿ.
ಅಧ್ಯಯನ ಪೀಠಗಳು ಸಾಮಾನ್ಯವಾಗಿ ನೀತಿ ನಿರೂಪಕರು, ಸಮುದಾಯದ ಸಂಸ್ಥೆಗಳು, ಇತರ ಶೈಕ್ಷಣಿಕ ವಿಭಾಗಗಳನ್ನು ಒಳಗೊಂಡಂತೆ ಬಾಹ್ಯ ಮಧ್ಯಸ್ಥಗಾರರೊಂದಿಗೆ ತೊಡಗಿಸಿಕೊಳ್ಳುತ್ತವೆ. ವೈವಿಧ್ಯತೆ ಮತ್ತು ಸಮಾನತೆಯನ್ನು ಉತ್ತೇಜಿಸುವ ಸಾಂಸ್ಥಿಕ ನೀತಿ ಪ್ರತಿಪಾದಿಸುತ್ತವೆ. ಇದರಿಂದ ಸಂಬಂಧಪಟ್ಟ ಸಮುದಾಯಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಉಪಯುಕ್ತವಾಗುತ್ತದೆ. ಅವುಗಳ ಸ್ಥಗಿತಗೊಂದಿಗೆ ಈ ಕೊಂಡಿ ಕಳಚಿಕೊಳ್ಳಲಿದೆ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದರು.
ವಿಶ್ವವಿದ್ಯಾಲಯ ಧ್ಯೇಯ ಮತ್ತು ಗುರಿಯನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ಪೀಠಗಳು ವಹಿಸುತ್ತವೆ. ಸಂಶೋಧನೆ, ಬೋಧನೆ, ಸೇವೆಯಲ್ಲಿ ಶ್ರೇಷ್ಠತೆಗೆ ಕೊಡುಗೆ ನೀಡುವ ಪೀಠಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಇವುಗಳಿಗೆ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರ ಮತ್ತು ಮೈವಿವಿ ನೀಡಿ ಪ್ರೋತ್ಸಾಹ ಕೊಡಬೇಕಿದೆ ಎಂಬುದು ಪ್ರಾಧ್ಯಾಪಕರ ಆಗ್ರಹವಾಗಿದೆ.
ಚಾಲ್ತಿಯಲ್ಲಿರುವ ಪೀಠಗಳಲ್ಲಿ ಡಾ.ಅಂಬೇಡ್ಕರ್, ಬಾಬು ಜಗಜೀವನರಾಮ್ ಪೀಠ ಮಾತ್ರ ಕ್ರಿಯಾಶೀಲವಾಗಿವೆ. ಉಳಿದಂತೆ ಪೀಠಗಳು ನಿಸ್ತೇಜವಾಗಿವೆ. ಇವುಗಳಿಂದ ವರ್ಷಕ್ಕೆ ಒಮ್ಮೆಯೂ ಕಾರ್ಯಕ್ರಮ, ಸಂವಾದಗಳು ನಡೆಯುತ್ತಿಲ್ಲ. ಬಹಳಷ್ಟು ವಿದ್ಯಾರ್ಥಿಗಳಿಗೂ ಕೆಲ ಪೀಠಗಳ ಹೆಸರು ಸಹ ಕೇಳಿಲ್ಲ. ಅಷ್ಟರ ಮಟ್ಟಿಗೆ ಇವುಗಳು ನಿಷ್ಕ್ರಿಯವಾಗಿವೆ.
7. ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್(ವಿಜಯ ಬ್ಯಾಂಕ್)