ಜಿಲ್ಲೆ

ನಿವೇಶನ ದರ ನಿಗದಿ ಶೀಘ್ರ ತೀರ್ಮಾನ ; ಸಚಿವ ಜಗದೀಶ ಶೆಟ್ಟರ್ ಭರವಸೆ

ತುಮಕೂರು : ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿದ ಕೈಗಾರಿಕಾ ನಿವೇಶನದ ನಿಗದಿತ ದರ ಜಾಸ್ತಿಯಾಯಿತು ಎಂಬ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ರಾಜ್ಯದ ಕೈಗಾರಿಕಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜತೆ ಸಭೆ ನಡೆಸುವುದಾಗಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್‌ಶೆಟ್ಟರ್ ಭರವಸೆ ನೀಡಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ‘ಉದ್ಯೋಗ ಭವನ’ದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ತುಮಕೂರಿನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಬಂಡವಾಳಗಾರರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ತುಮಕೂರು ಮಷಿನ್ ಟೂಲ್ಸ್ ಪಾರ್ಕ್, ಫುಡ್‌ಪಾರ್ಕ್, ಜಪಾನೀಸ್ ಕೈಗಾರಿಕಾ ಪ್ರದೇಶ ಹೀಗೆ ಹಲವಾರು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಮುಖ ಕೈಗಾರಿಕೆಗಳು ಕಾರ್ಖಾನೆಗಳನ್ನು ಪ್ರಾರಂಭಿಸಿವೆ, ಸ್ಥಳೀಯರು ಅಗತ್ಯ ಕೌಶಲ ಪಡೆದು ಉದ್ಯೋಗ ಪಡೆಯಬೇಕು ಎಂದರು. ಕೈಗಾರಿಕಾ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದು, ಶೀಘ್ರ ಪರಿಹರಿಸಲಾಗುವುದು. ಕೈಗಾರಿಕಾಭಿವೃದ್ಧಿ ಮಂಡಳಿ ವತಿಯಿಂದ ನಿಗದಿಪಡಿಸಲಾಗುವ ಕೈಗಾರಿಕಾ ನಿವೇಶನಗಳ ದರ ಹಾಗೂ ಮಂಜೂರು ಪ್ರಕ್ರಿಯೆ ಬಗ್ಗೆ ದೂರುಗಳಿದ್ದು, ಎಲ್ಲವನ್ನೂ ಪರಿಹರಿಸಲಾಗುವುದು ಎಂದರು.

ನಿವೇಶನಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ತೆಗೆದುಕೊಳ್ಳುವ ದರ ಹಾಗೂ ಅಂತಿಮವಾಗಿ ನಿರ್ಧರಿಸುವ ದರ ಬಹಳಷ್ಟು ಜಾಸ್ತಿ ಎನ್ನುವುದು ಕೈಗಾರಿಕೋದ್ಯಮಿಗಳ ದೂರಾಗಿದೆ. ಇದು ನನ್ನ ಗಮನಕ್ಕೆ ಬಂದಿದೆ. ಜಮೀನಿನ ಮಾಲೀಕರಿಗೆ ನೀಡುವ ಪರಿಹಾರ ಹಾಗೂ ಅಭಿವೃದ್ಧಿಗೆ ಆಗುವ ಖರ್ಚು ಸೇರಿಕೊಳ್ಳುವ ಹಿನ್ನೆಲೆಯಲ್ಲಿ ದರ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳ ಕೈಗಾರಿಕಾ ಸಂಘಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸುವುದಾಗಿ ಹೇಳಿದರು.

ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪ್‌ಚಂದ್ರ ಸಾರಂಗಿ ಮಾತನಾಡಿ, ಕೈಗಾರಿಕೆಗಳಿಗೆ ಅವಶ್ಯವಿರುವ ವಿದ್ಯುತ್‌ಗಾಗಿ ಸೋಲಾರ್ ಪ್ಲಾಂಟ್‌ಗಳ ಮೂಲಕ ವಿದ್ಯುತ್ ಸಂಗ್ರಹಣಾಗಾರಗಳನ್ನು ನಿರ್ಮಿಸಿಕೊಳ್ಳಿ, ನೀರಿನ ಸಮಸ್ಯೆ ಬಗೆಹರಿಸಲು ಜಲ ಮೂಲಗಳನ್ನು ಸಂರಕ್ಷಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಡಾ.ಜಿ.ಪರಮೇಶ್ವರ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ಶಿವಶಂಕರ್, ಉಪಾಧ್ಯಕ್ಷ ರಾಮಮೂರ್ತಿ, ಕಾರ್ಯದರ್ಶಿ ಹರೀಶ್, ಸತ್ಯನಾರಾಯಣ್, ಎಫ್‌ಕೆಸಿಸಿ ಗೋಪಾಲರೆಡ್ಡಿ, ಕೆಎಸ್‌ಎಸ್‌ಐಡಿಸಿ ದತ್ತಾತ್ರೇಯ, ಕೆಐಎಡಿಬಿಯ ಸಿಇಒ ಶಿವಶಂಕರ್ ಇದ್ದರು.

ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸೂಕ್ತ ವೇತನ, ಊಟದ ವ್ಯವಸ್ಥೆ ಕಲ್ಪಿಸಬೇಕು, ತುಮಕೂರಿಗೆ 20 ಕಿಮೀ ದೂರದಲ್ಲಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಲಿದ್ದು ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ. ಕೆಲವು ಉದ್ಯಮಗಳಿಗೆ ನೀಡಿರುವ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು ಮತ್ತಷ್ಟು ದಿನ ಮುಂದುವರಿಸಲು ಸೂಚಿಸಲಾಗಿದೆ. ಪ್ರತಾಪಚಂದ್ರ ಸಾರಂಗಿ ಕೇಂದ್ರ ಸಚಿವ ವಸಂತನರಸಾಪುರ ಕೈಗಾರಿಕಾ ಪ್ರದೇಶ ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ, ಇಲ್ಲಿನ ರೈತರು ಜಮೀನು ನೀಡಿದ್ದು, ಅವರಿಗೆ ಯಾವುದೇ ಅನ್ಯಾಯ ಮಾಡದೆ ಜಮೀನಿಗೆ ತಕ್ಕ ಪರಿಹಾರ ನೀಡಲಾಗಿದೆ. ರೈಲ್ವೆ ಹಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಿದೆ. ಜಿ.ಎಸ್.ಬಸವರಾಜು ಸಂಸದ