ಶೃಂಗೇರಿಯಲ್ಲಿ ಆಯೋಜಿಸಿದ್ದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಪಾರ್ವತಿ, ಪ್ರವೀಣ್‌ಕುಮಾರ್, ಭುನೇಂದ್ರ, ಎನ್.ಜಿ.ರಾಘವೇಂದ್ರ, ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಸ್ಮಶಾನ, ಕೃಷಿಭೂಮಿ ಸಮಸ್ಯೆ ಇತ್ಯರ್ಥಗೊಳಿಸಿ

ಎಸ್.ಎನ್.ರವೀಂದ್ರ

ಶೃಂಗೇರಿ: ನೆಮ್ಮಾರ್ ಎಸ್ಟೇಟ್ ಗ್ರಾಮದ ಸರ್ವೇ ನಂ.2/15ರಲ್ಲಿ 20 ಗುಂಟೆ ಜಾಗ 2001ರಲ್ಲಿ ಮಂಜೂರಾಗಿದೆ. 23 ವರ್ಷಗಳಿಂದ ರುದ್ರಭೂಮಿ ನಿರ್ಮಿಸಿಲ್ಲ. ಈ ಕುರಿತು ತಹಸೀಲ್ದಾರ್, ಗ್ರಾಪಂ ಹಾಗೂ ನೆಮ್ಮಾರಿನ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ರುದ್ರಭೂಮಿಯ ಛಾವಣಿ ಹಾಗೂ ಅಲ್ಲಿಗೆ ತಲುಪಲು ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮದ ಕೃಷ್ಣ ಅವರು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಬಿ.ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಿದರು.

ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಸ್ಥಳ ಪರಿಶೀಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಯಡದಳ್ಳಿ ಕೃಷಿಕ ವೆಂಕಟೇಶ್ ಮನವಿಯನ್ನು ಅಧಿಕಾರಿಗಳಿಗೆ ನೀಡಿ ಮಾತನಾಡಿ, ಪ್ರಭಾವಿಯೊಬ್ಬರು ಅರಣ್ಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಕೇವಲ 200 ಮೀಟರ್ ದೂರದಲ್ಲಿ ಇರುವ ಹಳೇ ಮನೆಯ ಇ-ಸ್ವತ್ತನ್ನು ಬಳಸಿ ಸಂಬಂಧಪಟ್ಟ ಇಲಾಖೆಯಿಂದ ಅಡಕೆ ಸಂಸ್ಕರಣಾ ಘಟಕಕ್ಕೆ ಐದು ಲಕ್ಷ ರೂಪಾಯಿ ಸಬ್ಸಿಡಿ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಬಿ.ಮಲ್ಲಿಕಾರ್ಜುನ್ ಮಾತನಾಡಿ, ಅಡಕೆ ಸಂಸ್ಕರಣಾ ಘಟಕಕ್ಕೆ ಹಾಗೂ ಇ-ಸ್ವತ್ತು ವಿಚಾರ ತಾಳೆಯಾಗುವುದಿಲ್ಲ. ಎರಡೂ ಕಡೆಯವರು ಒಪ್ಪಿದರೆ ಮಾತ್ರ ಇತ್ಯರ್ಥಗೊಳಿಸಬಹುದು ಎಂದರು. ಕೃಷಿಕ ವೆಂಕಟೇಶ್ ಮಾತನಾಡಿ, ಕಾನೂನು ಬಾಹಿರ ಕೃತ್ಯಕ್ಕೆ ನನ್ನ ಸಹಮತವಿಲ್ಲ. ಸರ್ಕಾರಕ್ಕೆ ವಂಚಿಸುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತನಿಖಾಧಿಕಾರಿಯನ್ನು ಆಗ್ರಹಿಸಿದರು.
ನನ್ನ ತೋಟದ ಬಸಿಕಾಲುವೆ ನೀರನ್ನು ಮನೆಯ ಪಕ್ಕದ ಕೃಷಿಕರು ಪೈಪು ಹಾಕಿ ಜಮೀನಿಗೆ ಹಾಯಿಸಿಕೊಳ್ಳುವ ಕುರಿತು ತಾಪಂ ಹಾಗೂ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗೋಳಗೋಡು ಗ್ರಾಮದ ಕೃಷ್ಣಮೂರ್ತಿ ಅಹವಾಲು ಸಲ್ಲಿಸಿದರು. ಪಪಂ ಪೌರಕಾರ್ಮಿಕರ ಅಳಲನ್ನು ಕೇಳುವರು ಯಾರೂ ಇಲ್ಲ. ಜಿಲ್ಲೆಯ ಮೇಲಾಧಿಕಾರಿಗಳು ಕೂಡಾ ಬಂದಿಲ್ಲ. ಕಸ ವಿಲೇವಾರಿ ಆಗದೆ ತಾಲೂಕಿನಲ್ಲಿ ಡೆಂೆ ಪ್ರಕರಣ ಹೆಚ್ಚಾಗುತ್ತಿದೆ ಎಂದು ಪಪಂ ನಾಮನಿರ್ದೇಶಿತ ಸದಸ್ಯೆ ಸೌಮ್ಯಾ ವಿಜಯ್‌ಕುಮಾರ್ ಅಧಿಕಾರಿಗಳ ಗಮನ ಸೆಳೆದರು.
ನೆಮ್ಮಾರ್ ಗ್ರಾಮದ ಹೊಸಕೇರಿ ಕಾಲನಿ ಸಾಲ್ಮರದ ಸಮುದಾಯ ಭವನಕ್ಕೆ ಎಸ್ಸಿ ಹಾಗೂ ಎಸ್ಟಿ ಅನುದಾನದಲ್ಲಿ ಬಂದಿರುವ 100 ಕುರ್ಚಿಗಳಲ್ಲಿ ಕೇವಲ 14 ಕುರ್ಚಿಗಳನ್ನು ನೀಡಲಾಗಿದೆ. ಉಳಿದ ಕುರ್ಚಿಗಳನ್ನು ಅಂಗನವಾಡಿಗೆ ರವಾನಿಸಲಾಗಿದೆ. ಈ ಕುರಿತು ತಹಸೀಲ್ದಾರ್‌ಗೆ ಮನವಿ ಮಾಡಲಾಗಿದೆ. ನೆಮ್ಮಾರ್‌ನಿಂದ ಸುಂಕದಮಕ್ಕಿ ಹಾಗೂ ನೆಮ್ಮಾರಿನಿಂದ ಹೊಳೆಹೊದ್ದು ಸೇತುವೆಗಳನ್ನು ದುರಸ್ತಿ ಮಾಡಿಸಬೇಕು. ಹೊಸ್ಕೆರೆ ಗ್ರಾಮದ ಬಸ್‌ಸ್ಟಾೃಂಡ್ ಬಿದ್ದು ಎರಡು ವರ್ಷವಾಗಿದೆ. ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ತುಂಬ ಸಮಸ್ಯೆ ಆಗುತ್ತಿದೆ ಎಂದು ಹೊಸ್ಕೆರೆ ದುರ್ಗಾಪ್ರಸಾದ್ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.
ಅಹವಾಲು ಸ್ವೀಕರಿಸಿದ ಬಿ.ಮಲ್ಲಿಕಾರ್ಜುನ್ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಇಲಾಖೆ ಸ್ಪಂದಿಸುತ್ತದೆ ಎಂದರು.
ಪಪಂ ಮುಖ್ಯಾಧಿಕಾರಿ ಶ್ರೀಪಾದ ರಾವ್, ಇಲಾಖೆಯ ಪೋಲಿಸ್ ನಿರೀಕ್ಷಕರಾದ ಬಿ.ಸರಳಾ, ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆ ಸಿಪಿಸಿ ಕೆ.ಎನ್.ಮಲ್ಲಿಕಾರ್ಜುನ, ಹೆಡ್‌ಕಾನ್ಸ್‌ಸ್ಟೇಬಲ್ ಲೋಕೇಶ್. ಸಿಬ್ಬಂದಿ ರವಿಚಂದ್ರ, ತಾಪಂ ಅಧಿಕಾರಿ ಪಾರ್ವತಿ, ಪ್ರವೀಣ್‌ಕುಮಾರ್, ಜಿಪಂ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇಇ ಭುನೇಂದ್ರ, ಆರೋಗ್ಯ ಇಲಾಖೆ ಡಾ. ದಯಾನಂದ್, ಬಿಇಒ ಎನ್.ಜಿ.ರಾಘವೇಂದ್ರ, ಸಮಾಜಕಲ್ಯಾಣಾಧಿಕಾರಿ ಮಂಜುನಾಥ್ ಇತರರಿದ್ದರು.