ಹನೂರು: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ದ್ವೇಷ, ಅಸೂಯೆ ಬಿಟ್ಟು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅಭಿಯೋಜನಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಗ್ರಾಮಗಳಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾದರೆ ಊರಿನ ಯಜಮಾನರು ಅರಳಿಕಟ್ಟೆಯಲ್ಲಿ ಒಂದೆಡೆ ಸೇರಿ ಮಧ್ಯಸ್ಥಿಕೆಯಲ್ಲಿ ನ್ಯಾಯ ಪಂಚಾಯಿತಿಯ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಡಿಮೆಯಾಗಿದೆ. ಇದರಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಹಾಗಾಗಿ ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಜು.1ರಿಂದ ಅ. 7ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ಪರಿಹಾರ ಹೊಂದಬಹುದಾಗಿದೆ. ಹಾಗೆಯೇ ವಿಶೇಷ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್‌ಕುಮಾರ್ ಮಾತನಾಡಿ, ನ್ಯಾಯಾಲಯದಲ್ಲಿ ಇಂದಿಗೂ ಇತ್ಯರ್ಥವಾಗದ 3 ತಲೆಮಾರಿನ ಪ್ರಕರಣಗಳು ಸಹ ಇದೆ. ಆದ್ದರಿಂದ ಇಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಮಧ್ಯಸ್ಥಿಕೆ ಅಭಿಯಾನ ಅನುಕೂಲವಾಗಲಿದೆ. ಕೆಲ ಪ್ರಕರಣಗಳಲ್ಲಿ ದಾಖಲೆಗಳ ಆಧಾರದ ಮೇಲೆ ಕಕ್ಷಿದಾರರು ಗೆಲ್ಲುತ್ತಾರೆ. ಆದರೆ ಲೋಕ ಅದಾಲತ್‌ನಲ್ಲಿ ಮಧ್ಯಸ್ಥಿಕೆಯೇ ಪ್ರಮುಖ ಭಾಗವಾಗಿರುತ್ತಾರೆ. ಇದರಿಂದ ತ್ವರಿತವಾಗಿ ಪ್ರಕರಣಗಳಿಂದ ಮುಕ್ತಿ ಹೊಂದಬಹುದಾಗಿದೆ. ಆದ್ದರಿಂದ ಕಕ್ಷಿದಾರರು ಈ ಬಗ್ಗೆ ಮನಗಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ, ವಕೀಲರಾದ ಡಿ.ವೆಂಕಟಾಚಲ, ಎಸ್.ನಾಗರಾಜು, ಅಶೋಕ್, ಚಿನ್ನರಾಜು, ಸಬ್‌ಇನ್‌ಸ್ಪೆೆಕ್ಟರ್ ಮಂಜುನಾಥ್ ಪ್ರಸಾದ್ ಇದ್ದರು.