ಬೆಂಗಳೂರು:ವ್ಯಾಜ್ಯಗಳನ್ನು ಅನಗತ್ಯವಾಗಿ ನ್ಯಾಯಾಲಯದಲ್ಲಿ ದಾಖಲಿಸಿ ಸುದೀರ್ಘವಾಗಿ ಬೆಳೆಸುವ ಬದಲು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. .ದೀಕ್ಷಿತ್ ಸಲಹೆ ನೀಡಿದ್ದಾರೆ.
ನಗರದ ಖಾಸಗಿ ಕಾನೂನು ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ "ಪರ್ಯಾಯ ವಿವಾದ ಪರಿಹಾರ'ಕುರಿತು 2 ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಂಬಿಕೆಯ ಚೌಕಟ್ಟಿನಲ್ಲಿ ವ್ಯಾಜ್ಯ ತೀರ್ಮಾನ ಮಾಡುವ ಮೂಲಕ ಸಮಾನ ನ್ಯಾಯ ಪಾಲಿಸಬೇಕು. ವ್ಯಾಜ್ಯವನ್ನು ಒಂದು ಚೌಕಟ್ಟಿನೊಳಗೆ ಬಗೆಹರಿಸುವ ಅಗತ್ಯವಿದೆ.ಅದಕ್ಕಾಗಿ ವಕೀಲರು ತಮ್ಮ ಬಳಿ ಬರುವ ಕಕ್ಷಿದಾರರಿಗೆ ತಿಳಿಹೇಳಿ ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸಹಕರಿಸಬೇಕು. ದೇಶದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಕೇಸ್ಗಳು ಇತ್ಯರ್ಥವಾಗಿಲ್ಲ. ಇದಕ್ಕೆ ವಕೀಲರು,ನ್ಯಾಯಾಧೀಶರು ಮಾತ್ರ ಕಾರಣವಲ್ಲ. ಬೆಳೆಯುತ್ತಿರುವ ಜನಸಂಖ್ಯೆಯಿಂದ ಹೆಚ್ಚುತ್ತಿರುವ ವಿವಾದ, ಮನಸ್ತಾಪಗಳೂ ಕಾರಣವಾಗಿವೆ.ಯಾವುದೇ ವ್ಯಾಜ್ಯದ ಮೇಲೆ ಮೇಲ್ಮನವಿ, ಎರಡನೇ ಮೇಲ್ಮನವಿ...ಹೀಗೆ ವರ್ಷಗಟ್ಟಲೆ ಕಾಲಹರಣ ಮಾಡುವುದರಿಂದ ಪ್ರಕರಣಗಳು ಇತ್ಯರ್ಥಗೊಳ್ಳುವುದು ವಿಳಂಬವಾಗುತ್ತಿವೆ ಎಂದರು.
ವಕೀಲಿ ವೃತ್ತಿಯಲ್ಲಿ ತಮ್ಮ ವ್ಯಕ್ತಪಡಿಸುವಂತಹ ಕಲೆ ಕರಗತ ಮಾಡಿಕೊಳ್ಳಬೇಕು. ಕಾನೂನಿನ ವ್ಯಾಖ್ಯಾನ ಮೇಲೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಇತ್ಯರ್ಥಗೊಳ್ಳುತ್ತವೆ. ಸೂಕ್ತ ವ್ಯಾಖ್ಯಾನದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ವಕೀಲರು ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಭವಿಷ್ಯದ ವಕೀಲರಿಗೆ ಕಿವಿಮಾತು ಹೇಳಿದರು. ಮಾಹಿತಿ, ಾನ, ಜಾಣ್ಮೆಯ ಬಗ್ಗೆ ಎಲ್ಲರಲ್ಲೂ ಸ್ಪಷ್ಟತೆ ಇರಬೇಕು. ನಮ್ಮ ಜೀವನದ ಉದ್ದೇಶ ಕೇವಲ ಮಾಹಿತಿ ಸಂಗ್ರಹಕ್ಕೆ ಮಾತ್ರ ಸೀಮಿತವಲ್ಲ. ಆ ಮಾಹಿತಿಯನ್ನು ಜಾಣ್ಮೆಯಿಂದ ಪರಿವರ್ತಿಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದ ನ್ಯಾಯಮೂರ್ತಿಗಳು, ಇದಕ್ಕೆ ಹಲವು ಕವಿ, ಲೇಖಕರ ಕವಿತೆ, ಲೇಖನಗಳ ಸಾಲುಗಳನ್ನು ಪ್ರಸ್ತಾಪಿಸಿ ಉದಾಹರಣೆ ಮೂಲಕ ವಿವರಿಸಿದರು.
ಪ್ರಕಾಶಕ ಡಾ.ಡಿ.ಎಂ.ಹೆಗ್ಡೆ, ಸೌಂದರ್ಯ ಪಿ.ಮಂಜಪ್ಪ,ಸೌಂದರ್ಯ ಎಜುಕೇಷನಲ್ ಟ್ರಸ್ಟ್ನ ಸಿಇಒ ಕೀರ್ತನ್ ಕುಮಾರ್ ಮತ್ತಿತರರಿದ್ದರು.