ಮೂಡಿಗೆರೆ: ಬಡ ಕುಟುಂಬದವರ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಮಾಡಿದವರು ಸಮಾಜದಲ್ಲಿ ಅತ್ಯಂತ ದೊಡ್ಡ ಮಟ್ಟದ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿ.ಎಚ್.ಮಹಮ್ಮದ್ ಹೇಳಿದರು.
ತಾಲೂಕು ಬ್ಯಾರಿ ಒಕ್ಕೂಟದಿಂದ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ಮಂತರು ಬೇಕಾ ಬಿಟ್ಟಿ ಖರ್ಚು ಮಾಡಿ ಮದುವೆ ಮಾಡಿದಾಗ, ನಮಗೆ ಅಂತಹ ಭಾಗ್ಯವಿಲ್ಲ ಎಂದು ಬಡವರ ಮಕ್ಕಳು ಮರುಕ ಪಡುತ್ತಾರೆ. ದುಂದು ವೆಚ್ಚದ ಮದುವೆಯಿಂದ ಯಾವುದೇ ಪ್ರಯೋಜನವಿಲ್ಲ. ಸರಳವಾಗಿ ತಮ್ಮ ಮಕ್ಕಳಿಗೆ ಮದುವೆ ಮಾಡುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು. ಸರಳ ಮದುವೆಯಿಂದ ಉಳಿದ ಹಣದಿಂದ ಇತರರಿಗೆ ಸಹಾಯ ಮಾಡಿದರೆ ಬಡವರು ತಮ್ಮ ಮಕ್ಕಳ ಮದುವೆಗೆ ಸಾಲ ಮಾಡುವುದು ತಪ್ಪುತ್ತದೆ ಎಂದು ತಿಳಿಸಿದರು.
ಸರಳ ರೀತಿಯಲ್ಲಿ ಸಾಮೂಹಿಕವಾಗಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಮದುವೆಯಾದರೆ ಗೌರವಕ್ಕೆ ಕೊರತೆ ಬರುವುದಿಲ್ಲ. ಸರಳ ರೀತಿಯಲ್ಲಿ ಮದುವೆಯಾಗುವ ಜೋಡಿಗಳು ಮನೆಯಲ್ಲಿ ಆಡಂಬರದ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬಾರದು ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಮದುವೆಗಾಗಿ ಸಾಲ ಮಾಡಿದರೆ ಆ ಸಾಲ ತೀರಿಸಲು ವರ್ಷಪೂರ್ತಿ ದುಡಿಯ ಬೇಕಾಗುತ್ತದೆ ಎಂದು ತಿಳಿಸಿದರು.
ಬ್ಯಾರಿ ಸಮುದಾಯದ ಹಿರಿಯ ವ್ಯಕ್ತಿ ಯೂಸುಫ್ ಹಾಜಿ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯ ಬಿ.ಎಸ್.ಮಹಮ್ಮದ್. ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಎ.ಸಿ.ಅಯೂಬ್ ಹಾಜಿ ಇತರರಿದ್ದರು.