ಜಿಲ್ಲೆ

ಅನ್ಯ ಇಲಾಖೆಯಲ್ಲೇ ಬೇರುಬಿಟ್ಟ ಅಧಿಕಾರಿಗಳು: ಮಾತೃ ಇಲಾಖೆಗೆ ಕಳುಹಿಸುವ ಡಿಪಿಎಆರ್ ಪ್ರಯತ್ನಕ್ಕೆ ಹಿನ್ನಡೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಅನ್ಯ ಇಲಾಖೆಯಲ್ಲಿ ಅನವಶ್ಯಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿ- ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಕಳಿಸುವ ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆ ಪ್ರಯತ್ನಕ್ಕೆ ರಾಜಕೀಯ ಒತ್ತಡ ಅಡ್ಡಿಯಾಗಿದೆ. ಶಾಸಕರು ಮತ್ತು ಸಿಎಂ ಕಚೇರಿಯಿಂದ ಒತ್ತಡ ತಂದು ಸ್ವಇಚ್ಛೆಯ ಸ್ಥಳದಲ್ಲೇ ಮುಂದುವರಿಯಲು ಹಾತೊರೆಯುತ್ತಿರುವ ಅಧಿಕಾರಿಗಳಿಂದಾಗಿ ಅವರ ಸೇವೆಯು ಮಾತೃ ಇಲಾಖೆಯಲ್ಲಿ ಲಭ್ಯವಾಗುತ್ತಿಲ್ಲ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ‘ವಿಜಯವಾಣಿ’ಗೆ ದಾಖಲೆ ಲಭ್ಯವಾಗಿದ್ದು, ಜಲ ಸಂಪನ್ಮೂಲ ಇಲಾಖೆ ವಿವಿಧ ಶ್ರೇಣಿಯ ಇಂಜಿನಿಯರ್​ಗಳು ರಾಜಕೀಯ ಒತ್ತಡ ತಂದು ಡಿಪಿಎಆರ್ ನಿಯಮಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(ಎ)(2)ರಲ್ಲಿ ಸರ್ಕಾರದ ಸಮಾನ ದರ್ಜೆಯ ಹುದ್ದೆಗಳಿಗೆ ಕಾರಣಗಳನ್ನು ಲಿಖಿತ ಮೂಲಕ ದಾಖಲಿಸಿ ಒಂದು ಇಲಾಖೆಯ ನೌಕರರನ್ನು ಇನ್ನೊಂದು ಇಲಾಖೆಗೆ ವರ್ಗಾವಣೆ/ ನಿಯೋಜನೆ ಮೂಲಕ ನೇಮಿಸಲು ಆಸ್ಪದವಿದೆ.

ಕರ್ನಾಟಕ ನಾಗರಿಕ ನಿಯಮಾವಳಿಗಳ ನಿಯಮ 50ರಲ್ಲಿ ಸರ್ಕಾರದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ನಿಯೋಜನೆ ಮೇಲೆ ತೆರಳಲು ಮತ್ತು ನಿಯಮ 419ರ ಅನ್ಯಕಾರ್ಯನಿಮಿತ್ತ ನಿಯೋಜನೆ ಮೇಲೆ ತೆರಳಲು ನೌಕಕರಿಗೂ ಅವಕಾಶವಿದೆ. ಈ ನಿಯಮಗಳ ಅನ್ವಯ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ನಿಯೋಜನೆ ಮೇಲೆ ತೆರಳಲು ಕನಿಷ್ಠ ಮೂರು ವರ್ಷ, ಗರಿಷ್ಠ 5 ವರ್ಷಗಳ ಮಿತಿ ನಿಗದಿ ಪಡಿಸಲಾಗಿದೆ. ಈ ಮಿತಿಯನ್ನು ಗೌಣಮಾಡಿ ತಮ್ಮಿಷ್ಟದ ಇಲಾಖೆಯಲ್ಲಿ ಬೇರೆ ಬೇರೆ ಕಾರಣಕ್ಕೆ ಮುಂದುವರಿದಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಪಿಎಆರ್ ಅಪರ ಮುಖ್ಯಕಾರ್ಯದರ್ಶಿ ವಿ.ಮಂಜುಳ, ಎಲ್ಲ ಇಲಾಖೆಗೆ ಪತ್ರ ಬರೆದು ಬರೆದು, ಮಾಹಿತಿ ಕೋರಿದ್ದರು.

‘ಹಲವು ಅಧಿಕಾರಿ/ನೌಕರರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನಾವಶ್ಯಕವಾಗಿ ಹಾಗೂ ಒಂದೇ ಸ್ಥಳದಲ್ಲಿ ಬಹಳಷ್ಟು ವರ್ಷಗಳಿಂದ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ರೀತಿ ನಿಯೋಜನೆ ಮೇಲೆ ಹೆಚ್ಚಿನ ಅವಧಿಗೆ ಬೇರೆ ಇಲಾಖೆಗೆ ನಿಯೋಜಿಸಿದಲ್ಲಿ ವಾಸ್ತವವಾಗಿ ಅವರು ಯಾವ ಇಲಾಖೆಗೆ ನೇಮಕಗೊಂಡಿರುತ್ತಾರೋ ಆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದೇ ಇರುವುದರಿಂದ ಇವರ ಸೇವೆಯು ಮಾತೃ ಇಲಾಖೆಗೆ ಲಭ್ಯವಾಗದೆ ನೇಮಕಾತಿ ಉದ್ದೇಶ ವಿಫಲವಾಗುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಸರ್ಕಾರ ಇಂತಹ ಪ್ರಕರಣದಲ್ಲಿ ಪರಾಮಶಿಸಲು ಉದ್ದೇಶಿಸಿರುವುದರಿಂದ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಬರುವ ಅಧೀನ ಕಚೇರಿಗಳು/ ಸ್ವಾಯತ್ತ ಸಂಸ್ಥೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಪಾಲಿಕೆಗಳು/ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ವಿವರಗಳನ್ನು ಪಡೆದು ಕ್ರೋಡೀಕರಿಸಲು ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಎಚ್ಚೆತ್ತ ಕೆಲವು ಇಲಾಖೆಗಳು ತಮ್ಮಲ್ಲಿ ಅನಾವಶ್ಯಕವಾಗಿ ಇರುವವರನ್ನು ಪತ್ತೆ ಮಾಡಿ ಮಾತೃ ಇಲಾಖೆಗೆ ವಾಪಾಸು ಕಳಿಸುವ ಪ್ರಯತ್ನ ಮಾಡಿದವು. ಇಷ್ಟರ ನಡುವೆ ತಮ್ಮದಲ್ಲದ ಇಲಾಖೆಯಲ್ಲಿ ಬೇರುಬಿಟ್ಟ ಅಧಿಕಾರಿಗಳು ಮಾತ್ರ ರಾಜಕೀಯ ಒತ್ತಡ ತಂದು ತಾವಿದ್ದಲ್ಲೇ ಮುಂದುವರಿಯಲು ಪ್ರಯತ್ನ ನಡೆಸಿದ್ದಾರೆ.

ಅನ್ಯ ಇಲಾಖೆ ವ್ಯಾಮೋಹವೇಕೆ?

  • ಪ್ರಮುಖ ತೀರ್ಮಾನ ಮಾಡಲು ಆಯಕಟ್ಟಿನ ಸ್ಥಳಕ್ಕಾಗಿ
  • ಸಣ್ಣ ಇಲಾಖೆಯವರಿಗೆ ದೊಡ್ಡ ಇಲಾಖೆಯ ಮೇಲಾಸೆ
  • ಪ್ರಭಾರ ಜವಾಬ್ದಾರಿ ಗಿಟ್ಟಿಸಿ ದೊಡ್ಡ ಮೊತ್ತದ ನಿರ್ಣಯಕಾರರಾಗುವುದು
  • ತಮ್ಮೂರಿನಲ್ಲೇ ಉಳಿದುಕೊಳ್ಳುವ ಇಚ್ಛೆ

| ಶ್ರೀಕಾಂತ ಶೇಷಾದ್ರಿ