ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಮೇ ಅಂತ್ಯ ಹಾಗೂ ಜೂನ್ ಆರಂಭದಲ್ಲಿ ಸುರಿದ ಮಳೆಯಿಂದ ರೈತರು ಕೃಷಿ ಚಟುವಟಿಕೆಗೆ ಉತ್ಸುಕರಾಗಿದ್ದರು. ಆದರೆ ವಾರದಿಂದ ಮಳೆಯಾಗದೆ ಇರುವುದರಿಂದ ಬೆಟ್ಟುಗದ್ದೆಗಳೆಲ್ಲ ಒಣಗಿಹೋಗಿದೆ. ಪರ್ಯಾಯ ವ್ಯವಸ್ಥೆ ಮೂಲಕ ನೀರು ಹಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಒಂದು ವಾರದಿಂದ ಮಳೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೆಲವರ ಗದ್ದೆ ಒಣಗಿಹೋಗಿದೆ. ರೈತರು ಆತಂಕಕ್ಕೆ ಒಳಗಾಗಿದ್ದು, ಉಳುಮೆ ಮಾಡಲು ಹಾಗೂ ನೇಜಿ ಹಾಕಲು ಮಳೆಯನ್ನು ನಿರೀಕ್ಷಿಸುತ್ತಿದ್ದಾರೆ.
ಮಳೆ ನೀರು ಇಲ್ಲದೆ ಇರುವುದರಿಂದ ರೈತರು ಪಂಪ್‌ಸೆಟ್ ಮೂಲಕ ಗದ್ದೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಪಂಪ್‌ಸೆಟ್ ವ್ಯವಸ್ಥೆ ಇಲ್ಲದಿರುವ ಬಹುತೇಕ ಮಂದಿ ಗದ್ದೆ ಒಣಗುವ ಚಿಂತೆಯಲ್ಲಿದ್ದಾರೆ.
ಕೆಲವು ರೈತರು ಮಳೆಯ ವಾಸ್ತವ ಸ್ಥಿತಿ ಅರಿತು ಗದ್ದೆಯನ್ನು ಹದ ಮಾಡುವ ಗೋಜಿಗೆ ಹೋಗಲಿಲ್ಲ. ಮುಂದಿನ ವಾರದಿಂದ ಮಳೆಯಾಗುವ ನಿರೀಕ್ಷೆಯಿದ್ದು, ನಂತರದಲ್ಲಿ ಹದ ಮಾಡುವ ಯೋಜನೆಯಲ್ಲಿದ್ದಾರೆ.
ಬೆಟ್ಟುಗದ್ದೆಗಳು ನೀರಿನ ಕೊರತೆಯಿಂದ ಸಂಪೂರ್ಣವಾಗಿ ಒಣಗಿ ಹೋಗಿದ್ದು, ನೀರಾವರಿ ವ್ಯವಸ್ಥೆ ಇಲ್ಲದ ರೈತರು ಏನೂ ತೋಚದ ಸ್ಥಿತಿಯಲ್ಲಿದ್ದಾರೆ.
ಹೊರಜಿಲ್ಲೆಗಳಿಂದ ಭೂಮಿ ಹದ ಮಾಡಲು ಬಂದಿರುವ ಟ್ರಾೃಕ್ಟರ್‌ಗಳು ಮಳೆ ಇಲ್ಲದಿರುವುದರಿಂದ ಹದ ಮಾಡಲು ಸಾಧ್ಯವಾಗುತ್ತಿಲ್ಲ. ಹೆಬ್ರಿಯ ಅಲ್ಲಲ್ಲಿ ಟ್ರಾೃಕ್ಟರ್‌ಗಳು ಸಾಲುಕಟ್ಟೆ ನಿಂತಿವೆ. ದುಡಿಮೆ ಇಲ್ಲದೆ ಹೆಚ್ಚು ಟ್ಯಾಕ್ಟರ್ ಬರುವುದರಿಂದ ಸ್ಪರ್ಧೆಗಳು ಹೆಚ್ಚಾಗಿ ಆದಾಯ ಕಡಿಮೆಯಾಗಿದೆ. ಬಹುತೇಕ ಟ್ರಾೃಕ್ಟರ್ ಸವಾರರು ಚಿಂತೆಯಲಿದ್ದಾರೆ.
ಅಡಕೆ ಹಾಗೂ ತೆಂಗು ತೋಟಗಳಿಗೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೆಲವೆಡೆ ಸಣ್ಣ ಸಣ್ಣ ಅಡಕೆ ಗಿಡಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿದೆ. ಜೂನ್ ತಿಂಗಳಿನಲ್ಲಿ ಸ್ಪ್ರಿಂಕ್ಲರ್ ಬಳಕೆ ನಡೆದಿರುವ ಪ್ರಕರಣ ಕಡಿಮೆ.
ಸದ್ಯಕ್ಕೆ ಭೂಮಿ ತಂಪು ಇದೆ. ಕೆಲವು ರೈತರಿಗೆ ಭೂಮಿ ಹದ ಮಾಡಲು ಬಿಡುವು ಸಿಕ್ಕಂತಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ರೈತರು ಭಯಪಡುವ ಅವಶ್ಯಕತೆಯಿಲ್ಲ.-ಡಾ.ಧನಂಜಯ ಬಿ. ಹಿರಿಯ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ