ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಈ ಬಾರಿ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಆರಂಭದಲ್ಲೇ ನಿರಾಶೆಯ ಕಾರ್ಮೋಡ ಕವಿದಿದ್ದು, ಮಳೆ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ದಿನ ಅಬ್ಬರಿಸಿದ ಮಳೆರಾಯ ಕಳೆದ ನಾಲ್ಕು ದಿನಗಳಿಂದ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದ್ದು, ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಭಾರಿ ನಷ್ಟ ಅನುಭವಿಸಿದ್ದ ರೈತರು ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಮೇ ತಿಂಗಳಿನಲ್ಲಿ ಮುಂಗಾರುಪೂರ್ವ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿಸಿಕೊಂಡಿದ್ದರು. ಆದರೆ ಕೃಷಿ ಚಟುವಟಿಕೆಯ ಆರಂಭದಲ್ಲೇ ಮುಂಗಾರು ಕ್ಷೀಣಿಸಿರುವುದರಿಂದ ರೈತರು ಮಳೆಗಾಗಿ ಆಕಾಶದತ್ತ ದಿಟ್ಟಿಸಿ ನೋಡಲಾರಂಭಿಸಿದ್ದಾರೆ.
ಜೂನ್ ಮೊದಲ ವಾರ ನಾಲ್ಕು ದಿನ ಉತ್ತಮ ಮಳೆಯಾಗಿದ್ದು, ಬಿಟ್ಟರೆ ಆ ಬಳಿಕ ದೊಡ್ಡ ಪ್ರಮಾಣದ ಮಳೆ ಸುರಿದಿಲ್ಲ. ಪ್ರತಿನಿತ್ಯ ಬಿಟ್ಟು ಬಿಟ್ಟು ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಈ ಮಳೆ ಕೃಷಿ ಚಟುವಟಿಕೆಗಳಿಗೆ ಸಾಕಾಗುದಿಲ್ಲ ಎಂಬ ಮಾತು ರೈತಾಪಿ ವರ್ಗದಿಂದ ಕೇಳಿ ಬಂದಿದೆ. ಹೊಲಗದ್ದೆಗಳಲ್ಲಿ ಗೊಬ್ಬರ ಹಾಕಿ ನಾಟಿ ಮಾಡಲು ಗದ್ದೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ರೈತರು ಉತ್ತಮ ಮಳೆಗಾಗಿ ದೇವರ ಮೊರೆ ಹೊಕ್ಕಿದ್ದಾನೆ. ಬಹುತೇಕ ಎಲ್ಲ ಹೊಲ ಗದ್ದೆಗಳಲ್ಲಿ ಯಾಂತ್ರೀಕೃತ ಭತ್ತದ ಸಸಿಗಳ ನಾಟಿ ಕಾರ್ಯ ನಡೆಯುವುದರಿಂದ ಬಹುತೇಕ ರೈತರು ಚಾಪೆ ನೇಜಿಗೆ ಸಿದ್ಧತೆ ನಡೆಸಿದ್ದು, ಭತ್ತದ ಬೀಜಗಳನ್ನು ನೆನೆಸಿ ಇಟ್ಟಿದ್ದಾರೆ. ಇನ್ನೂ ಕೆಲವು ರೈತರು ನೇಜಿ ತಯಾರಿಸಿದ್ದು, ನಾಟಿ ಕಾರ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಯಾವುದಕ್ಕೂ ಮಳೆ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಮುಂಗಾರು ಮಳೆ ಆರಂಭದಲ್ಲೇ ಕ್ಷೀಣಿಸಿರುವುದರಿಂದ ಕೃಷಿ ಚಟುವಟಿಕೆಗಳ ವೇಗ ಕಡಿಮೆಯಾಗಿದೆ. ಹಲವಾರು ರೈತರು ಚಾಪೆ ನೇಜಿ ತಯಾರಿಸಿದ್ದು, ನಾಟಿ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಆದರೆ ಮಳೆ ಬಾರದಿರುವುದು ಚಿಂತೆಗೀಡು ಮಾಡಿದೆ. ಮಳೆ ಆಶಾದಾಯಕಾಗಿದ್ದಲ್ಲಿ ಕೃಷಿ ಚಟುವಟಿಕೆಗಳು ಇನ್ನಷ್ಟು ಉತ್ತಮವಾಗಿ ನಡೆಯಲಿದ್ದು, ಎಲ್ಲವೂ ವಾತಾವರಣ ಅವಲಂಬಿಸಿದೆ.-ವಿಜಯ ಪೂಜಾರಿ, ಕೃಷಿಕರು, ಗಂಗೊಳ್ಳಿ