ಅರವಿಂದ ಅಕ್ಲಾಪುರ ಶಿವಮೊಗ್ಗ
ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಪಿಎಂ ಸೂರ್ಯಘರ್ ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಅದರಲ್ಲೂ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಜಾರಿಗೆ ಬಂದ ಬಳಿಕ ಸೂರ್ಯಘರ್ ಕಡೆ ಮುಖ ಮಾಡುತ್ತಿರುವವರ ಸಂಖ್ಯೆ ಕ್ಷೀಣಿಸಿದೆ.
ಕೇಂದ್ರ ಸರ್ಕಾರದ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ ಮನೆಯ ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿ ಲಭ್ಯವಾಗಲಿದೆ. ಕಡಿಮೆ ಬಡ್ಡಿಗೆ ಸಾಲ ಸೌಲಭ್ಯವೂ ಸಿಗಲಿದೆ. ಇದರಿಂದ ಕುಟುಂಬವೊಂದು ತಿಂಗಳಿಗೆ ಸರಾಸರಿ 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಸಾಧ್ಯವಿದೆ. ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಮಾಸಿಕ 17 ಸಾವಿರ ರೂ.ವರೆಗೆ ಲಾಭವನ್ನೂ ಗಳಿಸಬಹುದು.
ಆರಂಭದಲ್ಲಿ ಈ ಯೋಜನೆ ಘೋಷಣೆಯಾದಾಗ ಜನರಿಂದ ಉತ್ತಮ ಸ್ಪಂದನೆಯ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ ನೋಂದಣಿ ಸಂಖ್ಯೆ ನಿರಂತರವಾಗಿ ಏರಿಕೆ ಕಂಡ ಕಾರಣ ಸಾಲ ವಿತರಣೆಗೆ ಬ್ಯಾಂಕ್‌ಗಳೂ ಸಜ್ಜಾದವು. ಆದರೆ ಕೆಲವೇ ದಿನಗಳಲ್ಲಿ ಈ ನಿರೀಕ್ಷೆ ಹುಸಿಯಾಯಿತು.
ನೋಂದಣಿ ಮಾಡಿಕೊಂಡವರು ಸಾವಿರ ಸಂಖ್ಯೆಯಲ್ಲಿದ್ದರೆ ಬ್ಯಾಂಕ್ ಕದ ತಟ್ಟಿದವರ ಸಂಖ್ಯೆ ನೂರರ ಲೆಕ್ಕಕ್ಕೆ ಇಳಿಕೆಯಾಯಿತು. ಮೆಸ್ಕಾಂ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಏನೇ ಹರಸಾಹಸಪಟ್ಟರೂ ಸೂರ್ಯಘರ್‌ಗೆ ಶಕ್ತಿ ತುಂಬಲು ಸಾಧ್ಯವಾಗಲೇ ಇಲ್ಲ. ಇತ್ತೀಚೆಗೆ ನೋಂದಣಿಯೂ ಬಹುತೇಕ ಕುಸಿದಿದೆ.
-----------
ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಿತಿಗತಿ
ಮೆಸ್ಕಾಂ ವಿಭಾಗಗಳು-4
ನೋಂದಣಿ ಸಂಖ್ಯೆ-16,826
ಸ್ಥಾಪನೆಯಾದ ಘಟಕಗಳು-242
ಸಬ್ಸಿಡಿ ಬಿಡುಗಡೆ-212 ಘಟಕ
-----------
ಎರಡು ತಾಲೂಕಿನಲ್ಲಿ ಆಸಕ್ತಿ:ಸುಗಮವಾಗಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಮೆಸ್ಕಾಂ ಜಿಲ್ಲೆಯ ಏಳು ತಾಲೂಕುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಣೆ ಮಾಡಿಕೊಂಡಿದೆ. ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶಿವಮೊಗ್ಗ ಹಾಗೂ ಸಾಗರ ತಾಲೂಕಿನಲ್ಲಿ ಮಾತ್ರ ಪಿಎಂ ಸೂರ್ಯಘರ್‌ಗೆ ಜನರು ಹೆಚ್ಚು ಆಸಕ್ತಿ ತೋರಿದ್ದಾರೆ. ಈಗಾಗಲೇ ಸ್ಥಾಪನೆಯಾದ ಘಟಕಗಳ ಪೈಕಿ ಹೆಚ್ಚಿನ ಘಟಕಗಳಿರುವುದು ಶಿವಮೊಗ್ಗ ಹಾಗೂ ಸಾಗರ ತಾಲೂಕಿನಲ್ಲಿ ಮಾತ್ರ.
ಗೃಹಜ್ಯೋತಿಯೂ ಕಾರಣ:ಕರ್ನಾಟಕ ಸರ್ಕಾರ ಗೃಹಜ್ಯೋತಿ ಜಾರಿಗೆ ತರುವ ಮುನ್ನವೇ ಕೇಂದ್ರ ಸರ್ಕಾರ ಪಿಎಂ ಸೂರ್ಯಘರ್ ಘೋಷಣೆ ಮಾಡಿತ್ತು. ಆದರೆ ಗೃಹಜ್ಯೋತಿಯಿಂದ ಬಹುತೇಕ ಕುಟುಂಬಗಳಿಗೆ ಮಾಸಿಕ ಬಳಕೆಗೆ ಬೇಕಾಗುವಷ್ಟು ವಿದ್ಯುತ್ ದೊರೆಯುತ್ತಿದೆ. ಹೀಗಾಗಿ ಸೂರ್ಯಘರ್‌ಗೆ ನೋಂದಣಿ ಮಾಡಿಕೊಂಡ ಅನೇಕರು ಆ ಯೋಜನೆಯಿಂದ ಹಿಂದೆ ಸರಿದು ಗೃಹಜ್ಯೋತಿಯಲ್ಲೇ ಸಂತೃಪ್ತಿ ಕಂಡುಕೊಂಡರು. ನೋಂದಣಿ ಮಾಡಿಕೊಂಡವರನ್ನು ಸಂಪರ್ಕಿಸಿ ಮನವೊಲಿಸಲು ಮೆಸ್ಕಾಂ ಸಿಬ್ಬಂದಿ ಮುಂದಾದರೂ ಪ್ರಯೋಜನವಾಗಿಲ್ಲ.
ತಪ್ಪು ಅರ್ಥೈಸಿಕೊಂಡ ಜನರು:ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಎಂಬ ಪ್ರಧಾನ ನರೇಂದ್ರ ಮೋದಿ ಘೋಷಣೆಯನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಂಡರು. ಇದರ ಪ್ರಯೋಜನ ಪಡೆಯಲು ನಾವು ಹಣ ಖರ್ಚು ಮಾಡಿ ಸೌರ ವಿದ್ಯುತ್ ಉತ್ಪಾದನಾ ಘಟಕ ಹಾಕಿಕೊಳ್ಳಬೇಕಾಗುತ್ತದೆ ಎಂಬುದನ್ನು ಅರಿಯದೆ ಉತ್ಸಾಹದಿಂದ ನೋಂದಣಿ ಮಾಡಿಕೊಂಡರು. ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದ್ದರಿಂದ ಹೆಸರು ನೀಡುವವರಿಗೆ ಕೊರತೆಯಾಗಲಿಲ್ಲ. ಕೆಲವೆಡೆ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ನಿಂತು ನೋಂದಣಿ ಮಾಡಿಕೊಂಡರು. ಆದರೆ ಘಟಕ ಸ್ಥಾಪನೆ ವಿಷಯದಲ್ಲಿ ಮಾತ್ರ ಈ ಉತ್ಸಾಹ ಕಂಡು ಬರಲೇಇಲ್ಲ.
ಏಜೆನ್ಸಿ ಗುರುತಿಸಲಿಲ್ಲ: ಸೂರ್ಯಘರ್ ಯೋಜನೆ ಅನುಷ್ಠಾನಕ್ಕೆ ಕೆಲವೊಂದು ಸೋಲಾರ್ ಏಜೆನ್ಸಿಗಳನ್ನು ಸರ್ಕಾರ ಗುರುತು ಮಾಡಿತ್ತು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರು ತಮಗೆ ಬೇಕಾದ ಏಜೆನ್ಸಿ ಗುರುತಿಸಿ ಅವರೊಂದಿಗೆ ಮಾತುಕತೆ ನಡೆಸಿ ತಮಗೆ ಅಗತ್ಯವಿರುವ ಸೌರ ಘಟಕ ಸ್ಥಾಪನೆ ಬಗ್ಗೆ ಮಾಹಿತಿ ಪಡೆಯಬೇಕಿತ್ತು. ಬಳಿಕ ಫಲಾನುಭವಿ ಹಾಗೂ ಏಜೆನ್ಸಿ ಮೆಸ್ಕಾಂ ಅಧಿಕಾರಿಗಳನ್ನು, ಸಂಬಂಧಿಸಿದ ಬ್ಯಾಂಕನ್ನೂ ಸಂಪರ್ಕಿಸಬೇಕಿತ್ತು. ವಿಪರ್ಯಾಸವೆಂದರೆ ನೋಂದಣಿ ಮಾಡಿಕೊಂಡ ಶೇ.80ಕ್ಕೂ ಅಧಿಕ ಜನ ಮುಂದಿನ ಮಾರ್ಗಸೂಚಿಗಳನ್ನು ಪಾಲಿಸಲೇ ಇಲ್ಲ.
ಯೋಜನೆಯ ಸಾರಾಂಶ:ಪಿಎಂ ಸೂರ್ಯಘರ್ ಯೋಜನೆಯಡಿ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ಸೌರ ಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ ಶೇ.60ರವರೆಗೂ ಸಬ್ಸಿಡಿ ದೊರೆಯುತ್ತದೆ. ಒಂದು ಕಿಲೋವಾಟ್‌ನಿಂದ ಮೂರು ಕಿಲೋವಾಟ್‌ವರೆಗೆ ಸಹಾಯಧನ ದೊರೆಯಲಿದೆ. ಒಂದು ಕಿಲೋವಾಟ್‌ಗೆ 30 ಸಾವಿರ, ಎರಡಕ್ಕೆ 60 ಸಾವಿರ, ಮೂರು ಕಿ.ವಾ ಹಾಗೂ ಅದಕ್ಕಿಂದ ಹೆಚ್ಚಿನ ಸಾಮರ್ಥ್ಯದ ಘಟಕ ಸ್ಥಾಪನೆಗೆ ಗರಿಷ್ಠ 78 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ.