ಹನೂರಿನ ಬಡಾವಣೆಯೊಂದರಲ್ಲಿ ಕಸದ ರಾಶಿ ಬಿದ್ದಿರುವುದು.  
ಜಿಲ್ಲೆ

ಹನೂರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ

ಅಭಿನಯ್ ಎಚ್.ಎಂ

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯನ್ನು ಪದೇ ಪದೆ ವರ್ಗಾವಣೆ ಮಾಡುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು, ಸುಮಾರು 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. 13 ಸದಸ್ಯರ ಬಲವಿರುವ ಪಪಂನಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಇರುವುದರ ಜತೆಗೆ ಕಾಯಂ ಆರೋಗ್ಯಾಧಿಕಾರಿ, ಇಂಜಿನಿಯರ್, ಸಮುದಾಯ ಸಂಘಟನಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳಿಲ್ಲ. ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಿಗದಿತ ಅವಧಿಯೊಳಗೆ ಆಗುತ್ತಿಲ್ಲ. ಈ ಬಗ್ಗೆ ಪಪಂ ಚುನಾಯಿತ ಪ್ರತಿನಿಧಿಗಳೇ ಸಭೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾರ್ವಜನಿಕರು ಕೆಲಸ ಕಾರ್ಯಗಳ ನಿಮಿತ್ತ ಪಪಂ ಕಚೇರಿಗೆ ಅಲೆಯುವಂತಾಗಿದ್ದು, ಇಲ್ಲಿನ ಕಾರ್ಯವೈಖರಿಗೆ ಬೇಸತ್ತಿದ್ದಾರೆ.

ಈ ನಡುವೆ ಒಂದು ವರ್ಷದ ಅವಧಿಯಲ್ಲಿ ಮುಖ್ಯಾಧಿಕಾರಿಯನ್ನು 6 ಬಾರಿ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ಮೂವರು ಅಧಿಕಾರಿಗಳು ಹೊಸ ಮುಖ. ಇದೀಗ ಕಳೆದ 4 ದಿನದಿಂದೀಚೆಗೆ ಪೌರಾಡಳಿತ ನಿರ್ದೇಶನಾಲಯ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಶ್ರೀಧರ್ ಅವರನ್ನು ಹನೂರು ಪಪಂ ಮುಖ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪಟ್ಟಣದ ಸಂಪೂರ್ಣ ಚಿತ್ರಣ ಹಾಗೂ ಸಮಸ್ಯೆಯನ್ನು ತಿಳಿಯುವುದರೊಳಗೆ ಮುಖ್ಯಾಧಿಕಾರಿಯ ವರ್ಗಾವಣೆಯಾಗುತ್ತಿದೆ. ಹಾಗಾಗಿ ಪಪಂನಲ್ಲಿ ಮುಖ್ಯಾಧಿಕಾರಿ ಹುದ್ದೆಗೆ ಭದ್ರ ನೆಲೆ ಇಲ್ಲದಂತಾಗಿದೆ. ಪರಿಣಾಮ ಪಟ್ಟಣದ ಅಭಿವೃದ್ಧಿಗೆ ತೊಡುಕಾಗಿ ಪರಿಣಮಿಸಿರುವುದು ಒಂದೆಡೆಯಾದರೆ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.

ಒಂದು ವರ್ಷದಲ್ಲಿ 6 ವರ್ಗಾವಣೆ: ಪಟ್ಟಣ ಅಭಿವೃದ್ಧಿ ಹೊಂದಬೇಕಾದರೆ, ಸಮಸ್ಯೆಗಳು ಬಗೆಹರಿಯಬೇಕಾದರೆ ಹಾಗೂ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಮುಖ್ಯಾಧಿಕಾರಿ ಕನಿಷ್ಠ 2 ವರ್ಷವಾದರೂ ಪಪಂನಲ್ಲಿ ಉಳಿಯಬೇಕು ಎಂಬುದು ಸಾರ್ವಜನಿಕರ ಆಶಯ. ಆದರೆ ಹೀಗಾಗುತ್ತಿಲ್ಲ. ಕಳೆದ ಫೆಬ್ರುವರಿಯಿಂದ ಈವರೆಗೆ 6 ಮುಖ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದು, ದಿನಗಳು ಹಾಗೂ ತಿಂಗಳಿಗಷ್ಟೇ ಸೀಮಿತರಾಗಿದ್ದಾರೆ. ಇದರಲ್ಲಿ ಎ.ಟಿ. ಪ್ರಸನ್ನ ಎಂಬುವವರು 26 ದಿನ, ಮೂರ್ತಿ 12 ದಿನ, ಎಂ.ಪಿ ಮಹೇಶ್‌ಕುಮಾರ್ 6 ತಿಂಗಳು, ಮತ್ತೆ ಮೂರ್ತಿ ಅವರು 3 ತಿಂಗಳು, ಎಂ.ಮಹೇಶ್‌ಕುಮಾರ್ 2 ತಿಂಗಳು, ಆರ್. ಅಶೋಕ್ 10 ದಿನ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಕಳೆದ 4 ದಿನಗಳಿಂದ ಶ್ರೀಧರ್ ಮುಖ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಕೆಲಸ ಕಾರ್ಯಗಳು ಆಗುತ್ತಿಲ್ಲ: ಕಟ್ಟಡ, ವ್ಯಾಪಾರ ಪರವಾನಗಿ, ಖಾತೆ ಬದಲಾವಣೆ, ಇ ಸ್ವತ್ತು, ತೆರಿಗೆ ಪಾವತಿ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಜನರು ಬರುವುದು ಸಾಮಾನ್ಯ. ಆದರೆ ಸಿಬ್ಬಂದಿ ಕೊರತೆ ಹಾಗೂ ಮುಖ್ಯಾಧಿಕಾರಿ ವರ್ಗಾವಣೆಯಿಂದ ಕೆಲಸಗಳಾಗುತ್ತಿಲ್ಲ. ಇದರಲ್ಲಿ ಹೆಚ್ಚಾಗಿ ಇ ಸ್ವತ್ತು ಹಾಗೂ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಕೆಲಸಗಳಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ. ಈ ನಡುವೆ ಸಮರ್ಪಕವಾಗಿ ತೆರಿಗೆ ವಸೂಲಾತಿಯೂ ಆಗುತ್ತಿಲ್ಲ. ಇದರಿಂದ ಪಪಂಗೆ ಬರುವ ಆದಾಯದಲ್ಲಿ ಹಿನ್ನಡೆಯಾಗುತ್ತಿದೆ.

ಕಾಡುವ ಸಮಸ್ಯೆಗಳು: ಪಪಂ ವ್ಯಾಪ್ತಿಯ 13ನೇ ವಾರ್ಡ್‌ನಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಜತೆಗೆ 7, 8, 10ನೇ ವಾರ್ಡ್ ನಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗಾಗ್ಗೆ ತಲೆದೋರುತ್ತಲೇ ಇದೆ. ಇದರೊಂದಿಗೆ ಒಂದು ವರ್ಷದಿಂದ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಜತೆಗೆ ಚರಂಡಿಗಳಲ್ಲಿ ಹೂಳು ತುಂಬಿದೆ. ಈ ಸಮಸ್ಯೆಗಳು ವರ್ಷದಿಂದಲೂ ಕಾಡುತ್ತಲೇ ಇದೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಷ್ಟರೊಳಗೆ ಮುಖ್ಯಾಧಿಕಾರಿ ವರ್ಗಾವಣೆಯಾಗುತ್ತಿದೆ. ಈ ಬಗ್ಗೆ ಪಪಂ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕೆಶಿಪ್ ಕಾಮಗಾರಿ ಸ್ಥಗಿತ: ಪಟ್ಟಣದಲ್ಲಿ ಕೆಶಿಪ್ ಯೋಜನೆಯಡಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಈ ನಡುವೆ ಬಸ್ ನಿಲ್ದಾಣದ ಬಲ ಭಾಗದಲ್ಲಿ ವಾಣಿಜ್ಯ ಮಳಿಗೆಗಳಿದ್ದು, ಅಳತೆ ಕಾರ್ಯ ಮಾಡುವಂತೆ ಕೆಶಿಪ್ ಅಧಿಕಾರಿಗಳು ಪಪಂ ಮುಖ್ಯಾಧಿಕಾರಿಗೆ 20 ದಿನದ ಹಿಂದೆಯೇ ಪತ್ರ ಬರೆದಿದ್ದಾರೆ. ಆದರೆ ಮುಖ್ಯಾಧಿಕಾರಿ ಯಾವುದೇ ಕ್ರಮ ಕ್ರಮಕೈಗೊಂಡಿಲ್ಲ. ಇದರಿಂದ ಕೆಶಿಪ್ ಕಾಮಗಾರಿ ಸ್ಥಗಿತಗೊಂಡಿದೆ. ಮುಖ್ಯಾಧಿಕಾರಿ ವರ್ಗಾವಣೆಯಾಗುತ್ತಿರುವುದಕ್ಕೆ ಇದೂ ಒಂದು ಕಾರಣ ಎನ್ನಬಹುದಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಯಂ ಮುಖ್ಯಾಧಿಕಾರಿ ನೇಮಕಗೊಳಿಸಬೇಕು. ಆ ಮೂಲಕ ಪಟ್ಟಣದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಇ ಸ್ವತ್ತು ಮಾಡಿಸುವ ಸಂಬಂಧ ಪಪಂಗೆ ಅರ್ಜಿ ಸಲ್ಲಿಸಿ 8 ತಿಂಗಳು ಕಳೆದಿದೆ. ಆದರೆ ಮುಖ್ಯಾಧಿಕಾರಿ ಆಗಾಗ್ಗೆ ವರ್ಗಾವಣೆ ಆಗುತ್ತಿರುವುದರಿಂದ ಇಲ್ಲಿನ ನೌಕರರು ಇ ಸ್ವತ್ತು ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಚೇರಿಗೆ ಅಲೆಯುವಂತಾಗಿದ್ದು, ತೊಂದರೆಯಾಗಿದೆ.
ಕೆಂಪದೇವರು ದೇವಾಂಗಪೇಟೆ ನಿವಾಸಿ, ಹನೂರು

ಮುಖ್ಯಾಧಿಕಾರಿ ವರ್ಗಾವಣೆ ಆಗುತ್ತಿರುವುದರಿಂದ ಇ ಸ್ವತ್ತು ಹಾಗೂ ಖಾತೆ ಬದಲಾವಣೆಗಳಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆಯುವಂತಾಗಿದೆ. ಜತೆಗೆ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಪರಿಣಾಮ ಪಟ್ಟಣದ ಜನತೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಮುಖ್ಯಾಧಿಕಾರಿ ಅವರನ್ನು ಕಾಯಂಗೊಳಿಸಬೇಕು.
ಬಾಲರಾಜನಾಯ್ಡು, ಮಾಜಿ ಅಧ್ಯಕ್ಷ ಹನೂರು ಪಪಂ

ಮುಖ್ಯಾಧಿಕಾರಿ ವರ್ಗಾವಣೆ ಸರ್ಕಾರದ ಮಟ್ಟದಲ್ಲಿ ಆಗುತ್ತಿದೆ. ಹಾಗಾಗಿ ಅಧಿಕಾರ ವಹಿಸಿಕೊಂಡವರು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕಿದೆ. ಪಪಂನಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗುವುದು. ಹನೂರಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು.
ಸುಧಾ, ಜಿಲ್ಲಾ ನಗಾರಾಭಿವೃದ್ಧಿ ಯೋಜನಾಧಿಕಾರಿ

ಇತ್ತೀಚೆಗಷ್ಟೇ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಹಾಗಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು ಹಾಗೂ ಇರುವಂತಹ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಅಗತ್ಯ ಕ್ರಮವಹಿಸಲಾಗುವುದು.
ಶ್ರೀಧರ್ ಮುಖ್ಯಾಧಿಕಾರಿ ಹನೂರು ಪಪಂ