ದ.ಕ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ಗುರುವಾರ ಆಟೋರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿ ಸಭೆ ನಡೆಯಿತು. ಎಸ್ಪಿ ಡಾ. ಅರುಣ್ ಕೆ., ಡಿಸಿಪಿ ರವಿಶಂಕರ್, ಆರ್‌ಟಿಒ ಮುರುಗೇಂದ್ರ ಶಿರೋಳಕರ್ ಉಪಸ್ಥಿತರಿದ್ದರು. 
ಜಿಲ್ಲೆ

ಆಟೋ ಕನಿಷ್ಠ ದರ 50 ರೂ. ನಿಗದಿಪಡಿಸಿ

Chethan padubidri

ಪ್ರಮುಖ ಮುಖ್ಯಾಂಶಗಳು

  • ದರ ಪರಿಷ್ಕರಣೆ ಸಭೆಯಲ್ಲಿ ಆಟೋರಿಕ್ಷಾ ಚಾಲಕರ ಆಗ್ರಹ

ಮಂಗಳೂರು: ಬಸ್ ಟಿಕೆಟ್ ದರ ಸೇರಿದಂತೆ ಹೋಟೆಲ್ ಆಹಾರ ಇನ್ನಿತರ ಸ್ವತ್ತುಗಳ ಬೆಲೆ ಏರಿಕೆಯಾಗಿದೆ. ಹಾಗೆಯೇ ಆಟೋರಿಕ್ಷಾ ಪ್ರಯಾಣದ ಕನಿಷ್ಠ ದರವನ್ನು 35 ರೂ.ನಿಂದ 50 ರೂ.ಗೆ ಏರಿಸಬೇಕು ಎಂದು ಆಟೋರಿಕ್ಷಾ ಚಾಲಕ-ಮಾಲಕ ಸಂಘಟನೆಗಳ ಮುಖಂಡರು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಗ್ರಹಿಸಿದರು.

ದ.ಕ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ಗುರುವಾರ ಆಟೋರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿ ಪಡೀಲ್‌ನ ಪ್ರಜಾಸೌಧದಲ್ಲಿ ಸಭೆ ನಡೆಯಿತು.

ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಆಟೋರಿಕ್ಷಾ ಕನಿಷ್ಠ ಮೀಟರ್ ದರವನ್ನು 35 ರೂ.ನಿಂದ 50 ರೂ.ಗಳಿಗೆ ಏರಿಸಲೇಬೇಕು. ಬಳಿಕದ 1 ಕಿ.ಮೀ. ದೂರದ ಪ್ರಯಾಣ ದರವನ್ನು 20 ರೂ.ನಿಂದ 30 ರೂ.ಗಳಿಗೆ ಏರಿಸಬೇಕು. ಮಾತ್ರವಲ್ಲದೆ, ಆಟೋರಿಕ್ಷಾಗಳಲ್ಲಿ ವೇಟಿಂಗ್ ಸಮಯವನ್ನು 15ರಿಂದ 10 ನಿಮಿಷಗಳಿಗೆ ಇಳಿಕೆ ಮಾಡಬೇಕು ಎನ್ನುವ ಆಗ್ರಹವೂ ಮುಖಂಡರಿಂದ ವ್ಯಕ್ತವಾಯಿತು.

2022ರ ಬಳಿಕ ಆಟೋರಿಕ್ಷಾ ದರ ಪರಿಷ್ಕರಣೆ ಮಾಡಲಾಗಿಲ್ಲ. ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದಾಗಿ ಇಂಧನಗಳ ಬೆಲೆ ಏರಿಕೆಯಾಗಿದೆ. ವಾಹನಗಳ ಬಿಡಿ ಭಾಗಗಳ ಬೆಲೆಯಲ್ಲೂ ಹೆಚ್ಚಳವಾಗಿದ್ದು, ದಿನನಿತ್ಯದ ವಸ್ತುಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ರಿಕ್ಷಾ ಪ್ರಯಾಣ ದರ ಏರಿಸಬೇಕು. ಕೊರೊನಾ ಸಂದರ್ಭದಲ್ಲಿ ಕಷ್ಟದಲ್ಲಿರುವ ರಿಕ್ಷಾ ಚಾಲಕರಿಗೆ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಒದಗಿಸಿತ್ತು. ಅದೇ ಮಾದರಿಯಲ್ಲಿ ಪರಿಹಾರವನ್ನು ಈ ಸಂದರ್ಭದಲ್ಲೂ ಒದಗಿಸಬೇಕು ಎನ್ನುವ ಆಗ್ರಹವೂ ಕೇಳಿ ಬಂದಿತು.

ಪ್ರತ್ಯೇಕ ಮೀಟರ್‌ಗೆ ಆಗ್ರಹ

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಾಲೂಕುಗಳಿಗೆ ಅನುಗುಣವಾಗಿ ಪ್ರತ್ಯೇಕವಾಗಿ ಮೀಟರ್ ದರವನ್ನು ನಿಗದಿಪಡಿಸುವ ಅಗತ್ಯವಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಆಟೋಗಳು ನಗರ ಪ್ರದೇಶಗಳಲ್ಲಿ ಬಾಡಿಗೆ ಮಾಡುವುದು ತಪ್ಪಲಿದೆ ಎನ್ನುವ ಮಾತು ಸಭೆಯಲ್ಲಿ ವ್ಯಕ್ತವಾಯಿತು.

ಸಿಎನ್‌ಜಿ ಹಾಗೂ ಎಲ್‌ಪಿಜಿ ಪಂಪ್‌ಗಳಲ್ಲಿ ಮೀಟರ್ ರೀಡಿಂಗ್‌ನಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಾಗ ಪ್ರತಿಕ್ರಿಯಿಸಿದ ಡಿಸಿ, ತೂಕ ಮತ್ತು ಮಾಪನ ಅಧಿಕಾರಿಗಳು ಕಳೆದ ಮೂರು ತಿಂಗಳಿಂದ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಂತಹ ಯಾವುದೇ ಪ್ರಕರಣ ಇದುವರೆಗೆ ಕಂಡುಬಂದಿಲ್ಲ. ನಿರ್ದಿಷ್ಟ ಪ್ರಕರಣವಿದ್ದಲ್ಲಿ ದೂರು ಕೊಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಿಕ್ಷಾ ಚಾಲಕ ಮತ್ತು ಮಾಲಕರ ವಿವಿಧ ಸಂಘಟನೆಗಳ ಮುಖಂಡರಾದ ಅಬ್ದುಲ್ ಜಲೀಲ್, ಅರುಣ್ ಕುಮಾರ್, ರೆಹಮಾನ್ ಬೋಳಿಯಾರ್, ಭರತ್ ಕುಮಾರ್, ಶೇಖರ್ ದೇರಳಕಟ್ಟೆ, ವಿಶ್ವನಾಥ್, ಮೋಹನ್, ಗಣೇಶ್, ಅಬೂಬಕ್ಕರ್ ಸುರತ್ಕಲ್, ವಿಷ್ಣುಮೂರ್ತಿ, ಅನಿಲ್ ಕುಮಾರ್, ದೀಪಕ್‌ರಾಜ್ ಮೊದಲಾದವರು ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಡಿಸಿಪಿ ರವಿಶಂಕರ್, ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್ ಉಪಸ್ಥಿತರಿದ್ದರು.

ಎರಡು ತಿಂಗಳು ಕಾಯೋಣ

ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಮಾತನಾಡಿ, ಆಟೋರಿಕ್ಷಾ ದರ ಏರಿಸಿ ಎನ್ನುವ ಮುಖಂಡರ ಬೇಡಿಕೆ ತಪ್ಪಲ್ಲ. ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಇನ್ನೆರಡು ತಿಂಗಳಲ್ಲಿ ಇಂಧನ ಬೆಲೆಗಳಲ್ಲಿ ಇಳಿಕೆಯಾಗಲಿದೆ. ಹಾಗಾಗಿ ಅಲ್ಲಿಯವರೆಗೆ ಕಾದು ಬಳಿಕ ದರ ಪರಿಷ್ಕರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಒಮ್ಮಿಂದೊಮ್ಮೆಗೆ ದರ ಏರಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ

ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಮಾತನಾಡಿ, ನಾಲ್ಕು ವರ್ಷಗಳ ನಂತರ ಆಟೋರಿಕ್ಷಾದವರು ಬೆಲೆ ಏರಿಕೆಗೆ ನ್ಯಾಯಯುತವಾಗಿ ಆಗ್ರಹಿಸಿದ್ದಾರೆ. ಜಿಲ್ಲೆಯ ಆಟೋರಿಕ್ಷಾದವರು ನಿಯತ್ತಿನಿಂದ ದುಡಿಯುವವರು. ಹಾಗಾಗಿ ಅವರ ಬೇಡಿಕೆಯನ್ನು ಪರಿಗಣಿಸಿ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.

2022ರಲ್ಲಿ ಎಲ್‌ಪಿಜಿ ದರ 62 ರೂ.ಗಳಿದ್ದು, ಅದೀಗ 86 ರೂ.ಗಳಿಗೆ ಏರಿಕೆಯಾಗಿದೆ. ಸಿಎನ್‌ಜಿ ದರ 86 ರೂ.ನಿಂದ 95 ರೂ.ಗಳಿಗೆ ಏರಿಕೆಯಾಗಿದೆ. ಪೆಟ್ರೋಲ್ ದರ 101 ರೂ.ನಿಂದ 112 ರೂ.ಗಳಿಗೆ ಹಾಗೂ ಡೀಸೆಲ್ ದರ 87 ರೂ.ನಿಂದ 98 ರೂ.ಗಳಿಗೆ ಏರಿಕೆಯಾಗಿದೆ. ಆಟೋರಿಕ್ಷಾ ಪ್ರಯಾಣ ದರ ಏರಿಕೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.

— ದರ್ಶನ್ ಎಚ್.ವಿ., ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು