ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ದಲಿತ ಮುಖಂಡರು ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಮನವಿ ಸಲ್ಲಿಸಿದರು. ಬಸವರಾಜ ಪೂಜಾರಿ, ಬಾಲಚಂದ್ರ ಹುಲ್ಲೂರ, ಆನಂದ ಮುದೂರ ಇತರರಿದ್ದರು. 
ಜಿಲ್ಲೆ

ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕ ನಾಡಗೌಡರಿಗೆ ದಲಿತಪರ ಸಂಘಟನೆಗಳ ಮನವಿ

ಮುದ್ದೇಬಿಹಾಳ: ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೂರಾರು ಪ್ರತಿನಿಧಿಗಳು ಶನಿವಾರ ಪಟ್ಟಣದಲ್ಲಿ ಬೃಹತ್ ತಮಟೆ ಚಳವಳಿ ನಡೆಸಿ ಬಸವೇಶ್ವರ ವೃತ್ತದಲ್ಲಿ ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರಿಗೆ ಅಧಿವೇಶನದಲ್ಲಿ ತಮ್ಮ ಪರ ಧ್ವನಿ ಎತ್ತುವಂತೆ ಮನವಿ ಸಲ್ಲಿಸಿದರು.

ದಲಿತ ಸಂಘಟನೆಗಳ ರಾಜ್ಯ ಸಮಿತಿಯ ಪೂರ್ವತೀರ್ಮಾನದಂತೆ ರಾಜ್ಯವ್ಯಾಪಿ ಶಾಸಕರ ಮನೆಗಳ ಎದುರು ತಮಟೆ ಚಳವಳಿ, ಧರಣಿ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ ಇಲ್ಲಿನ ಪೊಲೀಸರು ಶಾಸಕರ ಮನೆ ಎದುರು ಧರಣಿಗೆ ಅವಕಾಶ ನೀಡಿರಲಿಲ್ಲ. ಮುಖಂಡರ ಜತೆ ಮಾತನಾಡಿ ಮನವಿ ಸ್ವೀಕರಿಸಲು ಶಾಸಕರು ಪ್ರವಾಸಿ ಮಂದಿರಕ್ಕೆ ಬರುವುದಾಗಿ ತಿಳಿಸಿದ್ದು ಅಲ್ಲಿಯೇ ಭೇಟಿಯಾಗುವಂತೆ ಸೂಚಿಸಿದ್ದರು. ಆದರೆ ಪ್ರವಾಸಿ ಮಂದಿರಕ್ಕೆ ಹೋಗಲೊಪ್ಪದ ಮುಖಂಡರು ಶಾಸಕರೇ ಬಸವೇಶ್ವರ ವೃತ್ತಕ್ಕೆ ಬರುವಂತೆ ಒತ್ತಾಯಿಸಿದ್ದರು. ಇದರಿಂದಾಗಿ ಶಾಸಕರು ಪೊಲೀಸ್ ಭದ್ರತೆಯಲ್ಲಿ ಆಗಮಿಸಿ ಮನವಿ ಸ್ವೀಕರಿಸಿದರು.

ಶಾಸಕ ನಾಡಗೌಡರು ಮಾತನಾಡಿ, ಸದನ ಸುಲಲಿತವಾಗಿ ನಡೆದಲ್ಲಿ ಶೂನ್ಯ ವೇಳೆಯಲ್ಲಿ ಅವಕಾಶ ಸಿಕ್ಕರೆ ಧ್ವನಿ ಎತ್ತುತ್ತೇನೆ. ನಾನು ಸಚಿವನಲ್ಲದ ಕಾರಣ ಕ್ಯಾಬಿನೆಟ್‌ನಲ್ಲಿ ಭಾಗವಹಿಸಲಾಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಚ್.ಸಿ.ಮಹದೇವಪ್ಪ ಸೇರಿ ಹಲವರು ಪಕ್ಷಾತೀತವಾಗಿ ಒಳಮೀಸಲಾತಿ ಅನುಷ್ಠಾನ ಪರ ಇದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಬೇಡಿಕೆ ಈಡೇರುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲಾ ದೌರ್ಜನ್ಯ ನಿವಾರಣಾ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಸಿದ್ದಾಪೂರ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಶಾಸಕರೊಂದಿಗೆ ಆಗಮಿಸಿದ್ದರು. ದಲಿತ ಸಂಘಟನೆಗಳ ಮುಖಂಡರಾದ ಬಾಲಚಂದ್ರ ಹುಲ್ಲೂರ, ಮಂಜುನಾಥ ಚಲವಾದಿ, ಸುಭಾಷ ಕಟ್ಟಿಮನಿ, ಶ್ರೀನಾಥ ಭೈರವಾಡಗಿ, ಮುದಕಪ್ಪ ಗರಸಂಗಿ, ಆನಂದ ಮುದೂರ, ರಮೇಶ ಕಂದಗನೂರ, ಶಿವು ನಾಲತವಾಡ, ಲಕ್ಷ್ಮಣ ಕಾಳಗಿ, ರಾಮು ತಂಬೂರಿ, ರಾವುತಪ್ಪ ಕಾಳಗಿ, ದೇವೇಂದ್ರ ಡೂಂಕಮಡು, ಮಹಾಂತೇಶ ಕಾಳಗಿ, ಬೆಳೆಪ್ಪ ತಳವಾರ, ಮಾರುತಿ ಸಿದ್ದಾಪೂರ ಇತರರಿದ್ದರು. ಸಿಪಿಐ ಗುರುಶಾಂತ ದಾಶ್ಯಾಳ, ಪಿಎಸ್‌ಐ ಸಂಜಯ ತಿಪ್ಪರೆಡ್ಡಿ ನೇತೃತ್ವದಲ್ಲಿ ಇತರ ಠಾಣೆಗಳ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.