ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಪಿ.ಮುರಳಿಮೋಹನ್ ರೆಡ್ಡಿ ಉದ್ಘಾಟಿಸಿದರು. ವಿಜಯಕುಮಾರ ಹೊನಕೇರಿ, ವೀರನಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಜೀತ ಪದ್ಧತಿಗೆ ಬಡತನ, ಅನಕ್ಷರತೆ ಕಾರಣ

ಶಂಕರ ಗೆಜ್ಜಿ

ಬೆಳಗಾವಿ: ದೇಶದಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಜೀತದಂತಹ ಅನಿಷ್ಠ ಪದ್ಧತಿಗಳು ಜೀವಂತ ಇರುವುದಕ್ಕೆ ಬಡತನ, ಅನಕ್ಷರತೆ, ನಿರುದ್ಯೋಗ ಕಾರಣ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಮುರಳಿಮೋಹನ್ ರೆಡ್ಡಿ ಹೇಳಿದರು.

ನಗರದ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ಹಾಗೂ ಜೀತ ಕಾರ್ಮಿಕ ಪದ್ಧತಿ ತಡೆಗಟ್ಟುವ ಕುರಿತು ಬೆಳಗಾವಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಳ್ಳಸಾಗಾಣಿಕೆ, ಜೀತ ಪದ್ಧತಿಯು ದೇಶದ ಬಹು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾದರೆ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದುಕೊಳ್ಳುವುದರ ಜತೆಗೆ ಕಾನೂನಿನ ಅರಿವು ಹೊಂದುವುದು ಅತಿ ಮುಖ್ಯವಾಗಿದೆ. ಜೀತ ಪದ್ಧತಿ ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಜೀತಪದ್ಧತಿಯಂತಹ ಅನಿಷ್ಠ ಪದ್ಧತಿ ಹೊಗಲಾಡಿಸಲು ಎಲ್ಲ ಇಲಾಖೆಗಳ ಸಹಕಾರ ಮತ್ತು ಸಹಭಾಗಿತ್ವ ಅವಶ್ಯಕವಾಗಿರುತ್ತದೆ. ಅಲ್ಲದೇ ಜೀತ ಪದ್ಧತಿ ನಿರ್ಮೂಲನೆಗಾಗಿ ಜಾರಿಯಲ್ಲಿರುವ ಕಾನೂನುಗಳ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.

ಅಪರ್ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತೀ ಅವಶ್ಯವಾಗಿರಬೇಕು. ಜೀತ ಪದ್ಧತಿ ನಿರ್ಮೂಲನೆ ಮಾಡಬೇಕಾದರೆ ಜೀತ ಪದ್ಧತಿ ಎಲ್ಲಿ ಯಾದರೂ ನಡೆದರೆ ಅದನ್ನು ಗುರುತಿಸಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಆಗ ಮಾತ್ರ ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಬದ್ದರಾಗಿದ್ದಲ್ಲಿ ಮಾತ್ರ ಜೀತ ಪದ್ಧತಿ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವೀರನಗೌಡ ಪಾಟೀಲ, ವಿಲಿಯಂ ಕ್ರಿಸ್ಟೋಫರ್, ವಿ.ಸುಶೀಲ, ಕರೆಪ್ಪ ಮಾದಿಗರ, ಬಾಬು ಹೊನೊಳೆ ಇತರರಿದ್ದರು.