ಜಿಲ್ಲೆ

ದೇಶರಕ್ಷಣೆಗಾಗಿ ಕರ್ತವ್ಯ ಸಲ್ಲಿಸುವುದು ಮಹೋನ್ನತ ಅನುಭವ

ಆದರ್ಶ್. ಎಂ.ಕೆ.

ಮಡಿಕೇರಿ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾಲ್ವರು ಯೋಧರಿಗೆ ಸನ್ಮಾನದ ಗೌರವ ಸಲ್ಲಿಸುವ ಮೂಲಕ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.


ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಗಿಲ್ ವಿಜಯ ದಿನದ ಸಮಾರಂಭದಲ್ಲಿ ಮಾಜಿ ಸೇನಾಧಿಕಾರಿಗಳಾದ ಹಾನರರಿ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್, ಎನ್.ಚಂದ್ರನ್, ಸಿ.ಪ್ರಮೋದ್ ಕುಮಾರ್, ಬಾಬು ಪ್ರಸಾದ್ ರೈ ಅವರನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್, ವಲಯ ಸೇನಾನಿ ಅನಿತಾ ಪೂವಯ್ಯ, ಅರಣ್ಯಾಧಿಕಾರಿ ಮಯೂರ್, ರೋಟರಿ ಪ್ರಮುಖರಾದ ಬಿ.ಜಿ.ಅನಂತಶಯನ, ಎಚ್.ಟಿ.ಅನಿಲ್, ಎಸ್.ಎಸ್.ಸಂಪತ್ ಕುಮಾರ್ ಸನ್ಮಾನಿಸಿ ಗೌರವಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ರಾಜಾರಾಮ್, ಕಾರ್ಗಿಲ್ ಪ್ರದೇಶದಲ್ಲಿ ದೇಶರಕ್ಷಣೆಗಾಗಿ ಕರ್ತವ್ಯ ಸಲ್ಲಿಸುವುದು ಜೀವನದ ಮಹೋನ್ನತ ಅನುಭವವಾಗಿದೆ. ಕಾರ್ಗಿಲ್ ಸಮರದ ಬಳಿಯ ದೇಶದ ರಕ್ಷಣಾ ಇಲಾಖೆಯು ಕಾರ್ಗಿಲ್‌ಗೆ ಅಗತ್ಯವಾಗಿದ್ದ ಅತ್ಯಾಧುನಿಕ ರಕ್ಷಣಾ ಉಪಕರಣ ೪೪೫ ಕಿ.ಮೀ, ವಿದ್ಯುತ್ ಬೇಲಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿತ್ತು ಎಂದರಲ್ಲದೇ, ಪ್ರವಾಸಿಗರು ಜೀವನದಲ್ಲಿ ಒಮ್ಮೆಯಾದರೂ ಕಾರ್ಗಿಲ್ ಯುದ್ಧ ಪ್ರದೇಶಕ್ಕೆ ತೆರಳಿ ಅಲ್ಲಿನ ಪ್ರಾಕೃತಿಕ ಸೌಂದರ್ಯದ ಜತೆಗೇ ಸೈನಿಕರ ಕಠಿಣ ಜೀವನ ಶೈಲಿ, ಪರಿಶ್ರಮ, ತ್ಯಾಗವನ್ನು ಕಾಣುವುದು ಸೂಕ್ತ ಎಂದು ಸಲಹೆ ನೀಡಿದರು.


ಎನ್.ಚಂದನ್ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ದಿನ ಮಾತ್ರ ಸೈನಿಕರನ್ನು ಸ್ಮರಿಸಿಕೊಳ್ಳುವಂತಾಗಬಾರದು. ಹಗಲಿರುಳು ಪರಿಶ್ರಮದಿಂದ ಗಡಿಗಳಲ್ಲಿ, ದೇಶದ ಬೇರೆ ಬೇರೆ ಕಡೆ ದೇಶಸೇವೆಯ ಕರ್ತವ್ಯ ಸಲ್ಲಿಸುತ್ತಿರುವ ಸೈನಿಕರನ್ನು ಸ್ಮರಿಸಿಕೊಂಡು ಯೋಧರನ್ನು ಗೌರವಿಸುವ ಕಾರ್ಯ ಸಮಾಜಬಾಂಧವರಿಂದ ಆಗಬೇಕು ಎಂದು ಮನವಿ ಮಾಡಿದರು.


ಸನ್ಮಾನಿತರಾದ ಸಿ.ಪ್ರಮೋದ್ ಕುಮಾರ್ ಮಾತನಾಡಿ, ಕಾರ್ಗಿಲ್ ಸಮರದ ಸಂದರ್ಭ ಮೊದಲ ಹಂತವಾಗಿ ಕಾರ್ಗಿಲ್ ಶಿಖರವೇರಿದ ೧೭ ಸೈನಿಕರ ಪೈಕಿ ಕೇವಲ ೭ ಸೈನಿಕರು ಮಾತ್ರ ಶಿಖರದ ತುತ್ತ ತುದಿ ತಲುಪಲು ಸಾಧ್ಯವಾಯಿತು. ಯೋಗೀಂದ್ರ ಸಿಂಗ್ ಯಾದವ್ ಎಂಬುವವರು ಗುಂಡಿನ ೯ ಬುಲೆಟ್ ದೇಹದೊಳಕ್ಕೆ ನುಗ್ಗಿದರೂ ಕಾದಾಡಿ ಶತ್ರುಸೈನಿಕರ ಸದೆಬಡಿದರು. ಅವರು ಇಂದಿಗೂ ಜೀವಂತವಾಗಿ ಇದ್ದಾರೆ ಎಂದು ಸ್ಮರಿಸಿದ ಅವರು, ಸಮಾಜವು ಯೋದರಿಗೆ ನೀಡುತ್ತಿರುವ ಸನ್ಮಾನವು ದೇಶದ ಎಲ್ಲಾ ಯೋಧರಿಗೆ ಸಲ್ಲುತ್ತದೆ ಎಂದು ಹೇಳಿದರು.


ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ನಮ್ಮ ದೇಶದ ತಿರಂಗ ಕೇವಲ ಗಾಳಿಯಿಂದ ಹಾರಾಡುತ್ತಿಲ್ಲ. ಅದರ ಹಾರಾಟದ ಹಿನ್ನಲೆಯಲ್ಲಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಸೈನಿಕರ ಉಸಿರಿನಿಂದ ಎಂದು ಸೈನಿಕರ ಪರಾಕ್ರಮವನ್ನು ಸ್ಮರಿಸಿದರು.


ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು ಮಾತನಾಡಿ, ದೇಶಕ್ಕಾಗಿ ತಮ್ಮೆಲ್ಲಾ ಸುಖಸಂತೋಷ ಬದಿಗಿಟ್ಟು ಕರ್ತವ್ಯ ಸಲ್ಲಿಸುತ್ತಿರುವ ವೀರರನ್ನು ಸ್ಮರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.


ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ವಂದಿಸಿದ ಕಾರ್ಯಕ್ರಮವನ್ನು ಕಿಗ್ಗಾಲು ರಂಜಿತ್, ರವಿಕುಮಾರ್, ಚಂದ್ರಶೇಖರ್, ಪ್ರವೀಣ್ ಕುಮಾರ್ ನಿರ್ವಹಿಸಿದರು. ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ರೋಟರಿ ವುಡ್ಸ್ ವತಿಯಿಂದ ಪುಪ್ಪಾರ್ಚನೆ ಮಾಡಲಾಯಿತು.