ಜಿಲ್ಲೆ

50ರ ಜನ್ಮದಿನ ಸಂಭ್ರಮಕ್ಕೆ ಸೇವಾ ಕಾರ್ಯ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ ಹುಟ್ಟುಹಬ್ಬ ಎಂದರೆ ಸಾರ್ವಜನಿಕರ ಅಭಿನಂದನೆ, ಬೃಹತ್ ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ಕತ್ತರಿಸುವ ಸಂಭ್ರಮ, ಮೋಜು ಹೀಗೆ ಎಲ್ಲೆಡೆ ಸಾಮಾನ್ಯ. ಬುಧವಾರ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ವಿ.ಸುನೀಲ್‌ಕುಮಾರ್ ವಿಭಿನ್ನ ಕಾರ್ಯಕ್ರಮಗಳಿಂದಾಗಿ ಗಮನ ಸೆಳೆದರು. ಕಾರ್ಕಳದ ಪುಲ್ಕೇರಿ ನಿವಾಸಿಯಾಗಿರುವ ಸುಂದರಿ ಎಂಬುವರಿಗೆ ನಿರ್ಮಿಸಿಕೊಟ್ಟಿದ್ದ ಮನೆಯ ಕೀ ಹಸ್ತಾಂತರಿಸಿದರು. ಹೆಬ್ರಿಯ ಬಡ ಕುಟುಂಬ ಚುಕ್ರಿ, ಗಣೇಶ್ ಸಾಣೂರು ಸೇರಿಸಿ ಇತರ ಅಶಕ್ತ ಕುಟುಂಬಗಳ ಮನೆ ನಿರ್ಮಾಣಕ್ಕೆ ಧನಸಹಾಯ ನೀಡಿದರು. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿದರು. ವಿಕಾಸ ಕಚೇರಿಯಲ್ಲಿ ನಡೆದ ಸೇವಾ ಕಾರ್ಯ ವಿತರಣೆಯ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸುನೀಲ್ ಕುಮಾರ್, ನನಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಅಶಕ್ತರನ್ನು ಗುರುತಿಸಿ, 50ಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡುವ ಪ್ರಯತ್ನ ನಡೆಸಿದ್ದೇವೆ. ಸಾಮಾಜಿಕ ಕೆಲಸ, ಸೇವಾ ಕಾರ್ಯ, ಇನ್ನಿತರ ಸಹಾಯ ಮಾಡುತ್ತಾ ಬಂದಿದ್ದೇವೆ. ಹೊಸ ಮನೆಗಳನ್ನು ರಿಪೇರಿ ಮಾಡುವ ಹೊಣೆಗಾರಿಕೆ ವಿಕಾಸ ಸೇವಾ ಸಂಸ್ಥೆ ವಹಿಸಿಕೊಂಡಿದೆ. ತರುಣ ಭಾರತ ಸಂಘ ಉತ್ತಮ ಕಾರ್ಯ ಚಟುವಟಿಕೆ ಮಾಡುತ್ತಾ ಬಂದಿದೆ. ನಮ್ಮ ಕಾರ್ಕಳ ಸ್ವಚ್ಛ ಕಾರ್ಕಳ ಎಂಬ ಪರಿಕಲ್ಪನೆ ಇಟ್ಟುಕೊಂಡು ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮೇಲೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು. ರವೀಂದ್ರ ಮಡಿವಾಳ ಮಾತನಾಡಿ, ದೇಶ ಸಂಭ್ರಮ ಪಡುವ ಈ ಸಮಯದಲ್ಲಿ ಪ್ರತಿ ವರ್ಷ ಇನ್ನೊಂದು ಸಂಭ್ರಮದ ಖುಷಿ ನಮ್ಮ ಕಾರ್ಕಳದ ಜನರಿಗಿದೆ. ಕಾರ್ಕಳವನ್ನು ಅಭಿವೃದ್ಧಿ, ಸಾಮಾಜಿಕ ಕಳಕಳಿಯ ಮುಖಾಂತರ ಹಲವಾರು ಕೊಡುಗೆ ನೀಡಿ ಪ್ರೇರಣಾ ಶಕ್ತಿಯಾಗಿ ನಿಂತವರು ಸುನೀಲ್ ಕುಮಾರ್ ಎಂದರು. ಪ್ರಮುಖರಾದ ಬೋಳ ಶ್ರೀನಿವಾಸ್ ಕಾಮತ್, ಅತ್ರಿ ಪ್ರಸನ್ನ ಶೆಟ್ಟಿ, ಜಯರಾಮ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

50ಕ್ಕೂ ಹೆಚ್ಚು ಸೇವಾ ಕಾರ್ಯ

ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಶ್ರವಣ ಸಾಧನಾ ವಿತರಣೆ, ಸ್ವಚ್ಛತಾ ಸಾಮಾಗ್ರಿ ವಿತರಣೆ, ಕಟ್ಟಿಂಗ್ ಮೆಷಿನ್, ಟೈಲರಿಂಗ್ ಮೆಷಿನ್, ಸೇವಾ ಮನೋಭಾವನೆಯ ಸಮಾಜಸೇವಾ ಸಂಸ್ಥೆಗಳಿಗೆ ಸಹಾಯಧನ ಹಸ್ತಾಂತರ ಸೇರಿದಂತೆ 50ಕ್ಕೂ ಅಧಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು.