ವಿರಾಜಪೇಟೆ; ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ರಾಷ್ಟೀಯ ಸೇವಾ ಯೋಜನಾ ದಿನ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ದಾನ, ಸೇವಾ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ಪ್ರಮುಖವಾಗಿ ಯುವಕರು ಪ್ರಕೃತಿಯನ್ನು ಆದಷ್ಟು ಮಾಲಿನ್ಯ ಮುಕ್ತ ಮಾಡುವುದರ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನನ್ನ ಮನೆ, ನನ್ನ ಕಾಲೇಜು, ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶುಚಿತ್ವ ಕಾಪಾಡುವುದಲ್ಲ. ಬದಲಾಗಿ ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿರಬೇಕು ಎಂಬ ಮನೋಭಾವನೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಭಾವನೆ ಮೊದಲು ನಮ್ಮಲ್ಲಿ ಬಂದರೆ ನಮ್ಮನ್ನು ನೋಡಿ ಇತರರೂ ಬದಲಾಗುತ್ತಾರೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ ಮಾತನಾಡಿ, ಸ್ವಚ್ಛತೆ ಎಂಬುದು ಮನದಿಂದ ಆರಂಭವಾಗಬೇಕು. ನಾವು ದೇಹ ಸ್ವಚ್ಛತೆಗೆ ಎಷ್ಟು ಪ್ರಾತಿನಿಧ್ಯ ನೀಡುತ್ತೇವೋ ಅದೇ ರೀತಿ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯತ್ತಲೂ ಅಷ್ಟೇ ಗಮನಹರಿಸಬೇಕು. ಯುವಸಮೂಹ ದೇಶದ ಶಕ್ತಿ ಎಂಬ ನಾಣ್ಣುಡಿಯಂತೆ ಯುವ ಜನತೆ ಬದಲಾದರೆ ದೇಶ ಬದಲಾಗುತ್ತದೆ. ಯುವಜನತೆ ಪರಿಸರವನ್ನು ಸ್ವಚ್ಛಗೊಳಿಸಿದರೆ ಅವರನ್ನು ನೋಡಿ ಇತರ ಜನರೂ ಕಲಿಯುತ್ತಾರೆ ಎಂದರು.
ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳ ಬಳಕೆ ಕಡಿಮೆಯಾಗಬೇಕಿದೆ. ಕಸವನ್ನು ಆದಷ್ಟು ಕಸದ ಬುಟ್ಟಿಗಳಿಗೆ ಹಾಕುವ ಕೆಲಸ ಮಾಡಬೇಕಿದೆ. ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆ ನೀಡಬೇಕಾಗಿದೆ ಎಂದು ಹೇಳಿದರು.
ನಂತರ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತೆಯೇ ಸೇವೆ ಎಂಬ ಧ್ಯೇಯ ವಾಕ್ಯದಡಿ ವಿರಾಜಪೇಟೆ-ಗೋಣಿಕೊಪ್ಪ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿ, ಕಸವನ್ನು ಸಂಗ್ರಹಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ಸಂಚಾಲಕ ನಾಗರಾಜು, ಎನ್ನೆಸ್ಸೆಸ್ಸ್ ಯೋಜನಾಧಿಕಾರಿ ಸುನಿಲ್ ಕುಮಾರ್ ಇತರರಿದ್ದರು.