ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಭವನದಲ್ಲಿ ಆರ್ಟ್ ಆಫ್ ಗಿವ್ಹಿಂಗ್​ ಫೌಂಡೇಶನ್​ ಬುಧವಾರ ನಡೆದ ವಿಶ್ವ ಸೇವಾ ಮನೋಭಾವ ದಿನಾಚರಣೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೇದ ಜಮಾದಾರ ಉದ್ಘಾಟಿಸಿದರು. ಡಾ. ಎಂ.ಪಿ. ಬಳಿಗಾರ, ಪ್ರಾಧ್ಯಾಪಕ ಡಾ. ವಿಷ್ಣು ಶಿಂಧೆ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಇತರರಿದ್ದರು. 
ಜಿಲ್ಲೆ

ಸೇವಾ ಮನೋಭಾವ ಅತ್ಯವಶ್ಯ

ವಿಜಯಪುರ: ತೊಂದರೆಯಲ್ಲಿರುವವರಿಗೆ ಯಾವುದೇ ಪ್ರತಿಲಾಪೇಕ್ಷೆಯಿಲ್ಲದೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ನಿಸ್ವಾರ್ಥ ಸೇವೆಯಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೇದ ಜಮಾದಾರ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಭವನದಲ್ಲಿ ಆರ್ಟ್ ಆಫ್ ಗಿವ್ಹಿಂಗ್​ ಫೌಂಡೇಶನ್​ ನವದೆಹಲಿ ಸಹಯೋಗದಲ್ಲಿ ನಡೆದ ವಿಶ್ವ ಸೇವಾ ಮನೋಭಾವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸುಂದರ ಸಮಾಜ ಕಟ್ಟಲು ಪ್ರತಿಯೊಬ್ಬರು ಸೇವಾ ಮನೋಭಾವ, ಸೌಹಾರ್ದತೆ ಬೆಳೆಸಿಕೊಳ್ಳಲು ಶ್ರಮಿಸಬೇಕು ಎಂದರು. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರಬೇಕು. ಜೀವನದಲ್ಲಿ ಆನಂದದ ಕ್ಷಣಗಳು ಹೇಳಿ ಬರುವುದಿಲ್ಲ. ಬಂದಾಗ ಚಿಕ್ಕ ಚಿಕ್ಕ ಆನಂದವನ್ನು ಸವಿಯುವ ಕಲೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ. ಎಂ.ಪಿ. ಬಳಿಗಾರ ವಿಶೇಷ ಉಪನ್ಯಾಸ ನೀಡಿ, ಸಮಾಜದಲ್ಲಿ ಬದುಕಲು ಪರಸ್ಪರ ಸಹಾಯ ಸಹಕಾರ ಅನಿವಾರ್ಯ. ನಾವು ಮಾಡುವ ಚಿಕ್ಕ ಚಿಕ್ಕ ಸಹಾಯಗಳು ಕೂಡಾ ಬೇರೆಯವರ ಜೀವನವನ್ನು ಉತ್ತಮಪಡಿಸುತ್ತವೆ ಎಂದರು.
ಪ್ರಾಧ್ಯಾಪಕ ಡಾ. ವಿಷ್ಣು ಶಿಂಧೆ ಮಾತನಾಡಿ, ಯುವ ಶಕ್ತಿ ಸರಿಯಾದ ರೀತಿಯಲ್ಲಿ ಬೆಳೆೆಯಬೇಕು. ವಿದ್ಯಾರ್ಥಿಗಳು ಸ್ವಾವಲಂಬಿಯಾಗಿರುವುದರ ಜೊತೆಗೆ ಬೇರೆಯವರಿಗೆ ಸಹಾಯ ಮಾಡುವ ಸಂಸ್ಕೃತಿ ಮತ್ತು ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಮಾತನಾಡಿ, ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು. ಇರುವ ಅವಕಾಶಗಳನ್ನು ಬಳಸಿಕೊಂಡು ಇತರರಿಗೆ ಸೇವೆ ಮಾಡುವುದು ಮಾನವ ಧರ್ಮ ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕಿ ಪ್ರೊ. ಶಾಂತಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಕಿತಾ ವಂದಿಸಿದರು.