ಜಿಲ್ಲೆ

ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಬಿಸಿಯೂಟ ಒದಗಿಸುವ ಸೇವೆ, ರಾಜಕೀಯ ಗಲಾಟೆ

ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಖಾಸಗಿ ಸಂಸ್ಥೆಯಿಂದ ಉಚಿತ ಬಿಸಿಯೂಟ ಒದಗಿಸುವ ಸೇವೆಯ ವಿಚಾರವು, ರಾಜಕೀಯ ಹೈಡ್ರಾಮಾಗೆ ಕಾರಣವಾಗಿದೆ.

ಸಮಾಜ ಸೇವಕ ಸಂದೀಪ್​ ರೆಡ್ಡಿ ನೇತೃತ್ವದ ಭಗತ್​ ಸಿಂಗ್​ ಚಾರಿಟಬಲ್​ ಟ್ರಸ್ಟ್​ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತಿದ್ದು ಇದರ ನಡುವೆ ಮಹಿಳಾ ಕಾಲೇಜಿನಲ್ಲಿ ಸಂಸ್ಥೆಯಿಂದ ಪ್ರತಿನಿತ್ಯ ಬಿಸಿಯೂಟ ಒದಗಿಸಲು ಮುಂದಾಗಿತ್ತು. ಇದಕ್ಕೆ ಅನುಮತಿ ನೀಡಿದ್ದ ಕಾಲೇಜಿನ ಪ್ರಾಂಶುಪಾಲರು, ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದು ಇದಕ್ಕೆ ರಾಜಕೀಯ ಒತ್ತಡವೇ ಪ್ರಮುಖ ಕಾರಣ ಎನ್ನಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

*ಅಸಲಿಗೆ ನಡೆದಿದ್ದೇನು*

ಕಳೆದ ಒಂದು ವಾರದ ಹಿಂದೆ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದೀಪ್​ ರೆಡ್ಡಿ, ಸವಲತ್ತುಗಳ ಕೊರತೆಯನ್ನು ಹೊಂದಿರುವ ಬಡ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಬಿಸಿಯೂಟ ಸೇವೆ ಒದಗಿಸುವುದಾಗಿ ಘೋಷಿಸಿದ್ದರು. ದೂರದ ಊರುಗಳಿಂದ ಬೆಳಿಗ್ಗೆಯೇ ಕಾಲೇಜಿಗೆ ಆಗಮಿಸುವ ಸಂದರ್ಭದಲ್ಲಿ ಅನೇಕರು ಉಪಾಹಾರವನ್ನು ಸೇವಿಸಿರುವುದಿಲ್ಲ. ಹಸಿವಿನಲ್ಲಿ ಪಾಠಪ್ರವಚನಗಳನ್ನು ಕೇಳಿ, ಮತ್ತೆ ಸಂಜೆ ಮನೆಗೆ ಹೋಗ ಬೇಕಾದ ಪರಿಸ್ಥಿತಿ ಇದೆ ಎಂಬುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದರು.

*ಗೇಟ್​ ಹೊರ ಭಾಗದಲ್ಲಿ ಊಟ*

ವಿದ್ಯಾರ್ಥಿನಿಯರಿಗಾಗಿ ಬಿಸಿಬಿಸಿ ಪಲಾವ್​ ತಯಾರಿಸಿಕೊಂಡು ಟ್ರಸ್ಟ್​ ನ ಅಧ್ಯಕ್ಷ ಸಂದೀಪ್​ ರೆಡ್ಡಿ ಮತ್ತು ಸಿಬ್ಬಂದಿ ಕಾಲೇಜಿನ ಒಳಗೆ ಬಿಡಲಿಲ್ಲ. ಗೇಟ್​ ಹಾಕಿ, ಬಂದ್​ ಮಾಡಿದ್ದಲ್ಲದೇ ಬಾಲಕಿಯರನ್ನು ನಿಗದಿತ ಅವಧಿಗಿಂತಲೂ ಒಂದು ಗಂಟೆ ಮುಂಚೆ ಮನೆಗೆ ಕಳುಹಿಸಿದೆ. ಇರುವ ವಿದ್ಯಾರ್ಥಿನಿಯರಿಗೂ ಆಹಾರ ಸೇವಿಸಲು ಬಿಡಲಿಲ್ಲ. ಇದರಿಂದ ಹೊರ ಭಾಗದಲ್ಲಿಯೇ ಇದ್ದವರಿಗೆ ವಿತರಿಸಬೇಕಾಯಿತು.

*ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ*

ವ್ಯವಹಾರ ಕೆಲಸಗಳಿಗೆ ಸಂಬಂಧಿಸಿದಂತೆ ಅಡ್ಡಿಪಡಿಸಿದರೆ ಸಮರ್ಥವಾಗಿ ಎದುರಿಸಲಾಗುವುದು. ಆದರೆ, ಬಡ ಮಕ್ಕಳ ಶೈಕ್ಷಣಿಕ ವಿಚಾರ ಮತ್ತು ಸೇವಾ ಚಟುವಟಿಕೆಯಲ್ಲಿ ಕಿರಿಕಿರಿಯನ್ನುಂಟು ಮಾಡಿದರೆ ಸುಮ್ಮನೆ ಇರುವುದಿಲ್ಲ. ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಸಂದೀಪ್​ ರೆಡ್ಡಿ ಸ್ಥಳಿಯ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಕ್ಷೇತ್ರದಲ್ಲಿ ನಾಯಕರು ಏನೇನು ಮಾಡಿದ್ದಾರೆ? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದೆ. ಜನರ ಹಿತವನ್ನು ಬಿಟ್ಟು ಸ್ವಂತ ಕೆಲಸಗಳು ಏನೇನು ಆಗಿವೆ ಎನ್ನುವುದು ಗೊತ್ತು?, ಸುಮ್ಮನೆ ನನ್ನ ತಂಟೆಗೆ ಬರಬೇಡಿ, ನನಗೆ ಏನು ಮಾಡಬೇಕು ಎನ್ನುವುದು ಗೊತ್ತು ಎಂದು ತಿಳಿಸಿದರು.

ಯಾವುದೇ ರಾಜಕೀಯ ಉದ್ದೇಶದಿಂದ ಶೈಕ್ಷಣಿಕ ಸೇವಾ ಚಟುವಟಿಕೆಯನ್ನು ಕೈಗೊಳ್ಳುತ್ತಿಲ್ಲ. ಅಗತ್ಯವಿದ್ದಲ್ಲಿ ಈಗಲೇ ಕಾಗದದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ಬರೆದುಕೊಡಲಾಗುತ್ತದೆ ಎಂದರು.