ಚಿತ್ರದುರ್ಗ: ದೇಶದ ಸರ್ವ ಕ್ಷೇತ್ರಗಳ ಪ್ರಗತಿಗೆ ಸೇವಾ ಮನಸ್ಸಿನ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ನಗರದ ಮಡಿವಾಳ ಗುರುಪೀಠದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಮಾಚಿದೇವ ರತ್ನ ಪ್ರಶಸ್ತಿ ಪ್ರದಾನ
ಮಾಡಿ ಮಾತನಾಡಿ, ಸಾಮಾನ್ಯ ಕುಟುಂಬದ ಆಂಜನೇಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು. 2022ರಲ್ಲಿ ಸಿದ್ದರಾಮಯ್ಯ ಅವರಿಗೆ ಮಾಚಿದೇವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಂಜನೇಯ ಅವರಿಗೂ ಈ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ ಅಂದಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರಿಗೆ ಆಗಿರಲಿಲ್ಲ. ಆದ್ದರಿಂದ ಇಂದು ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಂಜನೇಯ, ಎಲ್ಲ ಸಮುದಾಯಗಳ ಪ್ರಗತಿಗೆ ನನ್ನ ಅಧಿಕಾರವಧಿ ಅನುದಾನ ನೀಡಿದ್ದೇನೆ. ಅನೇಕ ಸಮುದಾಯಗಳು ಶೈಕ್ಷಣಿಕ ಪ್ರಗತಿಯ ಜತೆಗೆ ರಾಜಕೀಯ ಸ್ಥಾನಮಾನ ಪಡೆಯುವುದು ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮಠಾಧೀಶರು ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದ ಅವರು, ಮಡಿವಾಳ ಸಮುದಾಯಕ್ಕೆ ಎಸ್ಸಿ ಮೀಸಲು ಸೌಲಭ್ಯವನ್ನು ಸಂಪೂರ್ಣ ಒದಗಿಸಲು ಪ್ರತ್ಯೇಕ ಪ್ರವರ್ಗವನ್ನು ರಚಿಸ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಮುಖಂಡರಾದ ಸಿದ್ದಲಿಂಗಪ್ಪ, ಸಂಗಮೇಶ, ಈಶಣ್ಣ, ಶಿವಪ್ಪ, ಕಾಟಪ್ಪ, ಬಸವರಾಜ್ ಇತರರಿದ್ದರು.