ಚಿಕ್ಕಮಗಳೂರು: ಸೇವೆ ದೈವಿಕ ಉದ್ದೇಶದ ಕರ್ತವ್ಯ. ಅವಕಾಶ, ಮನಸ್ಸನ್ನು ಭಗವಂತನಲ್ಲಿ ಒಂದಾಗಿಸುವುದೇ ನಿಜವಾದ ಸೇವೆ ಎಂದು ಶ್ರೀ ಸತ್ಯಸಾಯಿ ಸೇವಾಸಂಸ್ಥೆ ಎಜ್ಯುಕೇರ್ ರಾಜ್ಯ ಸಂಯೋಜಕ ದಾವಣಗೆರೆ ಜಗನ್ನಾಥ ನಾಡಿಗೇರ್ ತಿಳಿಸಿದರು.
ಶ್ರೀ ಸತ್ಯಸಾಯಿ ಸೇವಾ ಸಮಿತಿ ನಗರದ ಮಧುವನ ಬಡಾವಣೆಯ ಶ್ರೀ ಸಾಯಿ ಮಂದಿರದಲ್ಲಿ ಸೋಮವಾರ ಸಾಯಿ ಸೇವೆ ಒಂದು ಶಕ್ತಿಯುತ ಸಾಧನ ಕುರಿತು ಏರ್ಪಡಿಸಿದ್ದ ಅಧ್ಯಯನ ಗೋಷ್ಠಿಯಲ್ಲಿ ಮಾತನಾಡಿದರು.
ಸೇವೆಗಳಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಮುಖವಾದವು. ನಮ್ಮ ಕೆಲಸಗಳು, ಮಾಡಿರುವ ಸೇವೆ ಭಗವಂತನಿಗೆ ಸಮರ್ಪಿಸಲು ಶಕ್ತಿಯುತ ಸಾಧನಗಳು ಅನುಸರಿಸಬೇಕು. ಶಿಸ್ತು, ಶರಣಾಗತಿ ಎಲ್ಲದರಲ್ಲೂ ದೇವರನ್ನೇ ಕಾಣುವ ಸ್ವಭಾವ ನಮ್ಮಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.
ದೈಹಿಕ ಸೇವೆಯಲ್ಲಿ ಶಿಸ್ತು, ಸಮಯಪ್ರಜ್ಞೆ, ಅಚ್ಚುಕಟ್ಟು, ನಾಯಕನ ಅನುಸರಣೆ ಮುಖ್ಯವಾದರೆ, ಮಾನಸಿಕ ಸೇವೆಯಲ್ಲಿ ಶರಣಾಗತಿಯ ಭಾವನೆ, ಭಗವಂತನಲ್ಲಿ ಅಪಾರ ನಂಬಿಕೆ-ಭಕ್ತಿ ಇರಬೇಕು. ನಾನು, ನನ್ನದು ಎಂಬ ಭಾವನೆ ಇರಬಾರದು. ಸೆೇವೆ ಅದೃಷ್ಟವಷ್ಟೇ ಅಲ್ಲ ಅವಕಾಶ ಎಂದು ಪರಿಭಾವಿಸಿದರೆ ಅದು ಶಕ್ತಿಯುತ ಸಾಧನ ಎನಿಸಿಕೊಳ್ಳುತ್ತದೆ ಎಂದರು.
ಅಣುವನ್ನು ಅನಂತದಲ್ಲಿ ಒಂದುಮಾಡಲು ಬಂದವರು ಸತ್ಯಸಾಯಿ ಭಗವಾನರು. ಭಗವಂತನ ವಿವಿಧ ಅವತಾರಗಳಲ್ಲಿ ಸತ್ಯಸಾಯಿ ಬಾಬಾ ಅವರದು ವೈವಿಧ್ಯಮಯವಾದ, ಜನರಿಗೆ ಸಮೀಪವಾದ ಅವತಾರ. ರಾಮ-ಕೃಷ್ಣರೊಂದಿಗೆ ಅನೇಕ ಸಂಗತಿಗಳನ್ನು ಇಲ್ಲಿ ಸಮೀಕರಿಸಲು ಸಾಧ್ಯವಾಗದು. ಭಕ್ತರ ಮನದಾಳದ ಇಂಗಿತವನ್ನು ತಾಯಿಗಿಂತ ಹೆಚ್ಚಾಗಿ ಅರ್ಥಮಾಡಿಕೊಳ್ಳುವ ಗುಣ ಭಗವಾನರಲ್ಲಿ ಕಾಣಬಹುದು ಎಂದು ತಿಳಿಸಿದರು.
ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ, ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಆರ್.ನಾಗರಾಜ, ಮಾಜಿ ಅಧ್ಯಕ್ಷ ಶ್ರೀನಿವಾಸಲು, ಅಂಕೋಲೇಕರ್ ಇದ್ದರು.