ಜಿಲ್ಲೆ

ಸೇವೆ, ಸಮರ್ಪಣೆ ಸ್ತ್ರೀತ್ವದ ಮೂಲಶಕ್ತಿ: ಕಾರ್ಮಾರು ದೇವಳದಲ್ಲಿ ಸಾಧ್ವಿ ಮಾತಾನಂದಮಯೀ ಶುಭನುಡಿ

ಸೌಮ್ಯ ಆರ್

ಬದಿಯಡ್ಕ: ಸೇವೆ ಮತ್ತು ಸಮರ್ಪಣೆ ನಾರಿಯ ಮೂಲ ಶಕ್ತಿಯಾಗಿದೆ. ಕುಟುಂಬ ಮತ್ತು ಸಮಾಜವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸ್ತ್ರೀತ್ವದ ಧೀಶಕ್ತಿ ಮಹತ್ತರವಾದುದಾಗಿದೆ. ಜಗನ್ಮಾತೆಯ ಅಂಶವೆಂದೇ ನಂಬಿರುವ ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀ ಪೂಜ್ಯಳೂ, ನಿರ್ಮಾತೃ ಆಗಿರುವುದರ ಜತೆಗೆ ಯುವ ಸಮಾಜವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಭಾರತೀಯ ಪರಂಪರೆ ಉಳಿಸುವಲ್ಲಿ ಮಾತೃಶಕ್ತಿ ಜಾಗೃತವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಹೇಳಿದರು. ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಶುಕ್ರವಾರ ನಡೆದ ಮಾತೃಸಂಗಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಯೋಜನೆಯ ಈಶ್ವರಿ ಬೇರ್ಕಡವು ಮಾತೃಸಂದೇಶ ನೀಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಸಂಶೋಧಕಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತಿಯೊಂದಿಗೆ ಅಂತರಂಗದ ಅನುಸಂಧಾನ ಇಂದು ಅಗತ್ಯವಿದೆ. ವೈಯುಕ್ತಿಕ ವಿಕಾಸಕ್ಕೆ, ಮನ ಕ್ಷೋಭೆಯ ನಿವಾರಣೆಗೆ ಬೆಂಬಲ ಅಗತ್ಯ ಎಂದರು. ಹಿರಿಯ ಪ್ರಸೂತಿ ತಜ್ಞೆ ಡಾ.ಪದ್ಮಾವತಿ ಕೊಲ್ಲಂಪಾರೆ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರ್ ಶುಭಹಾರೈಸಿದರು. ಜಯಲಕ್ಷ್ಮೀ ಟೀಚರ್ ಮಾನ್ಯ, ಶಾಂತಾ ಕುಂಟಿನಿ, ಶಶಿ ಸದಾನಂದ ಶೆಟ್ಟಿ ಕಾರ್ಮಾರು, ಜಯಂತಿ ಚಕ್ರೇರ್ಶವರ ಮಲ್ಲಡ್ಕ, ಆಶಾಕಿರಣ ಟೀಚರ್ ಮುಂಡೋಡು, ಸುಧಾದೇವಿ ಟೀಚರ್ ಕಾರ್ಮಾರು, ಸರಸ್ವತಿ ನಾಯ್ಕ ಕಾರ್ಮಾರು, ರಂಜಿತಾ ನವೀನ್ ಕಾರ್ಮಾರು, ಜ್ಯೋತಿ ಕಾರ್ಮಾರು ಉಪಸ್ಥಿತರಿದ್ದರು. ಮಾತೃ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಮೋಹನ ಸ್ವಾಗತಿಸಿದರು. ಮಹಿಳಾ ವೃಂದದ ಅಧ್ಯಕ್ಷೆ ಜ್ಯೋತಿ ಕಾರ್ಮಾರು ವಂದಿಸಿದರು. ಶಿಕ್ಷಕಿ ಶಾಲಿನಿ ಮಹೇಶ್ ವಳಕ್ಕುಂಜ ಹಾಗೂ ಧನ್ಯಶ್ರೀ ಸರಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಮಾರು ಶ್ರೀ ಮಹಾವಿಷ್ಣು ಮಹಿಳಾ ಭಜನಾ ತಂಡದದಿಂದ ಕುಣಿತ ಭಜನೆ ಹಾಗೂ ಮಂಜೇಶ್ವರದ ನಾಟ್ಯನಿಲಯಂನ ವಿದ್ವಾನ್ ಬಾಲಕೃಷ್ಣ ಮಾಸ್ತರ್ ಶಿಷ್ಯವೃಂದದಿಂದ ಭರತನಾಟ್ಯ ನಡೆಯಿತು.

ಬದುಕಿನಲ್ಲಿ ಸತ್ಫಲದ ಸವಿಯುಣ್ಣಲು ಜೀವನ ವೃಕ್ಷದ ಬೇರು ಸನಾತನ ಧರ್ಮ ವೃಕ್ಷದ ವಿಶಾಲ ತಳಹದಿಯಲ್ಲಿ ಬೆಳೆಯಬೇಕು. ಸರ್ವವ್ಯಾಪಿ ಭಗವಂತನ ಅನುಭವ ವೇದ್ಯವಾಗುವಲ್ಲಿ ದೇವಾಲಯಗಳ ಪಾತ್ರ ಮಹತ್ತರವಾದುದು. ಭಕ್ತಿಯ ಪರಾಕಾಷ್ಠೆಯನ್ನು ಸಾಧಿಸಿದಾಗ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸಾದ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ವರ್ತಮಾನದ ಪ್ರಪಂಚ-ಸಮಾಜ ವ್ಯವಸ್ಥೆ ಒಂದಷ್ಟು ಪ್ರತ್ಯೇಕ ಹಾದಿ ಹಿಡಿದಂತಿದೆ. ನಡೆ-ನುಡಿ, ವಸ್ತ್ರ-ಆಭರಣಗಳೇ ಮೊದಲಾದ ವಿಷಯಗಳು ಬದಲಾಗುತ್ತಿದೆ. ದಡಮೀರಿ ಸಂಚರಿಸುವ ವ್ಯವಸ್ಥೆಗಳನ್ನು ಮತ್ತೆ ಪರಂಪರೆಯತ್ತ ಕರೆತರುವಲ್ಲಿ ಯುವ ಸಮೂಹಕ್ಕೆ ಮಾತೃಶಕ್ತಿ ದಾರಿ ತೋರಿಸಬೇಕಿದೆ. ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವಲ್ಲಿ ದೇಶೀಯತೆಯ ಲೇಪಗಳೊಂದಿಗೆ ಮಾತೆಯರು ನವ ಸಮಾಜದ ಚುಕ್ಕಾಣಿ ಹಿಡಿಯಬೇಕು. ಈಶ್ವರಿ ಬೇರ್ಕಡವು, ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಯೋಜನೆ