ಮುಂಡಗೋಡ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಗಳ ಐದು ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ.
ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದವರು ಚುನಾವಣೆಗೂ ಮುನ್ನ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಮಹಿಳಾ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತರಲಾಗಿದೆ. ಇದೀಗ ಎರಡನೇ ಗ್ಯಾರಂಟಿಯಾಗಿ ಗೃಹಜ್ಯೋತಿ 200 ಯೂನಿಟ್ ವಿದ್ಯುತ್ ಉಚಿತ ಯೋಜನೆಗೆ ಭಾನುವಾರ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ.
ಸರ್ವರ್ ಸಮಸ್ಯೆ ವಿಪರೀತ
ಗೃಹಜ್ಯೋತಿ ಯೋಜನೆಯ ಸುದುಪಯೋಗ ಪಡೆದುಕೊಳ್ಳಲು ಫಲಾನುಭವಿಗಳು ತಮ್ಮ ಮನೆಯ ವಿದ್ಯುತ್ ಬಿಲ್, ಆಧಾರ ಕಾರ್ಡ್ ಹಾಗೂ ಮೊಬೈಲ್ ತೆಗೆದುಕೊಂಡು ಹೋಗಿ ಕಂದಾಯ ಇಲಾಖೆಯ ನೆಮ್ಮದಿ, ಹೆಸ್ಕಾಂ, ಗ್ರಾಮ ಒನ್ ಆನ್‌ಲೈನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿ ವೇಳೆ ತಮ್ಮ ಮೊಬೈಲ್‌ಫೋನ್‌ಗೆ ಬರುವ ಒಟಿಪಿ ಸಂಖ್ಯೆ ನೀಡಬೇಕಾಗುತ್ತದೆ. ಆದರೆ, ಗ್ರಾಮಒನ್ ಆನ್‌ಲೈನ್ ಕೇಂದ್ರದಲ್ಲಿ ಕೆಲ ಸಮಯ ಗೃಹಜ್ಯೋತಿ ಸೈಟ್ ಓಪನ್ ಆಗಿತ್ತು. ಅದನ್ನು ಹೊರತು ಪಡಿಸಿದರೆ ಮತ್ತೆ ಈ ಸೈಟ್ ಓಪನ್ ಆಗುತ್ತಿಲ್ಲ. ಸರ್ವರ್ ಸಮಸ್ಯೆ ಎಂದು ಸಿಬ್ಬಂದಿ ಸಾರ್ವಜನಿಕರಿಗೆ ಹೇಳುತ್ತಿದ್ದಾರೆ.
ನೋಂದಣಿಗೆ ಬಂದು ಮರಳಿದ ಜನ
ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಭಾನುವಾರ ಸಂಜೆ ಹಾಗೂ ಸೋಮವಾರ ವಿವಿಧ ಗ್ರಾಮಗಳಿಂದ ಜನರು ಆಗಮಿಸಿದ್ದರು. ತಹಸೀಲ್ದಾರ್ ಕಚೇರಿ, ಹೆಸ್ಕಾಂ ಕಚೇರಿ, ಗ್ರಾಮಒನ್ ಕೇಂದ್ರಗಳಿಗೆ ಸೂಕ್ತ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದರು. ಆದರೆ, ಗೃಹಜ್ಯೋತಿ ಸೈಟ್ ಓಪನ್ ಆಗದ ಕಾರಣ ಸಾರ್ವಜನಿಕರು ಮರಳಿ ಮನೆಗೆ ಹೋಗುವಂತಾಯಿತು. ಮಂಗಳವಾರವಾದರೂ ಗೃಹಜ್ಯೋತಿ ನೋಂದಣಿ ಮಾಡುವ ಸೈಟ್ ಓಪನ್ ಆಗುವುದೋ? ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದಲ್ಲಿ ಏಕಕಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೃಹಜ್ಯೋತಿ ವೆಬ್‌ಸೈಟ್ ಅನ್ನು ಬಳಕೆ ಮಾಡುತ್ತಿರುವುದರಿಂದ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಭಾನುವಾರ ಸ್ವಲ್ಪ ಪ್ರಮಾಣದಲ್ಲಿ ಸರ್ವರ್ ಸರಿಯಾಗಿತ್ತು. ಆದರೆ, ಸೋಮವಾರ ಸರ್ವರ್ ಸಮಸ್ಯೆಯಿಂದ ಯಾವುದೇ ನೋಂದಣಿ ಮಾಡಲು ಸಾಧ್ಯವಾಗಿಲ್ಲ.I ವಿನಾಯಕ ಪೇಟಕರ ಹೆಸ್ಕಾಂ ಇಂಜಿನಿಯರ್, ಮುಂಡಗೋಡ