ಮುಳಬಾಗಿಲಿನ ಗ್ರಾಮ ಒನ್​ ಸೇವಾ ಕೇಂದ್ರಗಳ ಮುಂದೆ ಬುಧವಾರ ಹೊಸ ಬಿಪಿಎಲ್​ ಕಾರ್ಡ್​ ನೋಂದಣಿಗೆ ಆಗಮಿಸಿರುವ ಸಾರ್ವಜನಿಕರು. 
ಜಿಲ್ಲೆ

ಬಿಪಿಎಲ್​ ಕಾರ್ಡ್​ ಪಡೆಯಲು ಸರ್ವರ್​ ಕಂಟಕ

ಕೋಲಾರ ಡೆಸ್ಕ್

ಮುಳಬಾಗಿಲು: ಬಿಪಿಎಲ್​ ಪಡಿತರ ಚೀಟಿ ಪಡೆಯಲು ಸಾರ್ವಜನಿಕರು ನಿತ್ಯ ಸರ್ಕಾರಿ ಕಚೇರಿಗೆ ಅಲೆಯುವುದೇ ಕಾಯಕವಾಗಿದೆ. 2 ವರ್ಷಗಳಿಂದ ಹೊಸ ಕಾರ್ಡ್​ ಸಿಗದೆ ಅನೇಕರಿಗೆ ಪರಿತರ ಪಡೆಯುವುದಿರಲಿ ತುರ್ತು ವೈದ್ಯಕಿಯ ಸೇವೆ ಪಡೆಯಲೂ ಪರದಾಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಸೇವಾ ಕೇಂದ್ರಗಳ ಮುಂದೆ ಹೊಸ ಕಾರ್ಡ್​ಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಸಾರ್ವಜನಿಕರು ಪರದಾಡುತ್ತಿರುವ ದೃಶ್ಯ ಹೇಳತೀರದಾಗಿದೆ.

ಜು.2, 3 ರಂದು ಬೆಳಗ್ಗೆ 10 ರಿಂದ 12 ಮತ್ತು ಸಂಜೆ 4 ರಿಂದ 6 ರವರೆಗೂ ಬಿಪಿಎಲ್​ ಕಾರ್ಡ್​ಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ಆಹಾರ ಇಲಾಖೆ ಸಂದೇಶ ಹರಿದಾಡಿದ ಬೆನ್ನಲ್ಲೇ ಗ್ರಾಮಒನ್​ ಮತ್ತು ಕರ್ನಾಟಕ ಒನ್​ ಸೇವಾ ಕೇಂದ್ರಗಳ ಮುಂದೆ ಜನರ ದಂಡೇ ನೆರೆದಿತ್ತು. ಆದರೆ, ಅರ್ಜಿ ಹಾಕಲು ಸರ್ವರ್​ ಪ್ರಾಬ್ಲಂ ಎದುರಾಗಿ ಬರಿಗೈಲಿ ವಾಪಸ್​ ಆಗುವಂತಾಗಿದೆ. ತಾಲೂಕಿನಲ್ಲಿ ಗ್ರಾಮ ಒನ್​ 40 ಕೇಂದ್ರಗಳಿದ್ದು, ಕರ್ನಾಟಕ ಒನ್​ 2 ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಲ್ಲಿ ಎರಡು ದಿನಗಳಿಂದ ಹೊಸ ಬಿಪಿಎಲ್​ ಕಾರ್ಡ್​ಗೆ ಅರ್ಜಿ ಸಲ್ಲಿಸಲು ದುಂಬಾಲು ಬೀಳುತ್ತಿದ್ದರೂ ಆನ್​ಲೈನ್​ ಸರ್ವರ್​ ಪಾಬ್ಲಂ ಸರಿ ಹೋಗಲಿಲ್ಲ. ಇದರಿಂದ ಫಲಾನುಭವಿಗಳು ಸರ್ಕಾರಕ್ಕೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಪ್ರತಿದಿನವೂ ಸುತ್ತುವುದೇ ಕಾಯಕ: 2023ರ ಸೆಪ್ಟೆಂಬರ್​ನಿಂದ ಡಿಸೆಂಬರ್​ನಲ್ಲಿ ಮುಳಬಾಗಿಲು ತಾಲೂಕಿನಲ್ಲಿ ತಿದ್ದುಪಡಿಗೆ 815 ಅರ್ಜಿ ಸಲ್ಲಿಕೆಯಾಗಿದ್ದು, ಇದುವರೆಗೂ ಒಂದೇ ಒಂದು ಪಡಿತರ ಚೀಟಿ ತಿದ್ದುಪಡಿ ಮಾಡಲು ಅವಕಾಶ ಲಭಿಸಿಲ.್ಲ ಇದರಿಂದ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೊಸ ಕಾರ್ಡ್​ಗೆ ಅರ್ಜಿ ಪಡೆಯಲಿದ್ದಾರೆ ಎಂಬ ಮಾಹಿತಿಯಿಂದ ಬಹುತೇಕ ಕುಟುಂಬ ಸದಸ್ಯರ ಆಧಾರ್​ಕಾರ್ಡ್​, ಆದಾಯ ಪ್ರಮಾಣ ಪತ್ರದೊಂದಿಗೆ ವರ್ಷದಿಂದ ಅಲೆಯುತ್ತಿದ್ದಾರೆ. ಪ್ರತಿ ತಿಂಗಳು 2 ದಿನ ಆನ್​ಲೈನ್​ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ಮನಗಂಡು ಸೇವಾ ಕೇಂದ್ರಗಳಿಗೆ ಮುಗಿಬೀಳುತ್ತಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ. ಕೂಲಿನಾಲಿ ಬಿಟ್ಟು ಬಿಪಿಎಲ್​ ಕಾರ್ಡ್​ಗಾಗಿ ತಿರುಗಾಡುವುದೇ ಕಾಯಕವಾಗಿದೆ.

ಪೂರ್ಣಗೊಳ್ಳದ ನೋಂದಣಿ ಪ್ರಕ್ರಿಯೆ: ತಾಲೂಕಿನಲ್ಲಿ ಎಎವೈ (ಅಂತ್ಯೋದಯ) 4,976 ಕಾರ್ಡ್​ಗಳು, ಬಿಪಿಎಲ್​ 58,867, ಎಪಿಎಲ್​ 1,768 ಸೇರಿ ಒಟ್ಟು 63,843 ಕಾರ್ಡ್​ಗಳು ಇವೆ. ನಗರದಲ್ಲಿ 25, ಗ್ರಾಮಾಂತರದಲ್ಲಿ 94 ನ್ಯಾಯಬೆಲೆ ಅಂಗಡಿಗಳು ಸೇರಿ ಒಟ್ಟು 119 ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳು ಇರುವ ಬಿಪಿಎಲ್​ ಮತ್ತು ಎಎವೈ ಕಾರ್ಡ್​ಗಳ ಪ್ರತ್ಯೇಕ ನೋಂದಣಿ ಕಳೆದ ಜನವರಿಯಿಂದ ಇದುವರೆಗೂ ನಡೆಯುತ್ತಲೇ ಇದೆ. ಆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ವರ್ಗದ ಫಲಾನುಭವಿಗಳ ಕುಟುಂಬ ಸದಸ್ಯರ ಜಾತಿ ಆದಾಯ ಪ್ರಮಾಣ ಪತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಆನ್​ಲೈನ್​ ಮೂಲಕ ದಾಖಲೀಕರಣ ಮಾಡಲಾಗುತ್ತಿದ್ದು, ಇದಕ್ಕೂ ಸರ್ವರ್​ ಸಮಸ್ಯೆ ಕಾಡುತ್ತಿದೆ.

ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ನೀಡುತ್ತಿಲ್ಲ, ತುರ್ತು ವೈದ್ಯಕಿಯ ಸೇವೆ ಇರುವ ಫಲಾನುಭವಿಗಳಿಗೆ ಬಿಪಿಎಲ್​ ಕಾರ್ಡ್​ ಮಾಡಿಸಿಕೊಳ್ಳಲು ರಾಜ್ಯಾದ್ಯಂತ ಪ್ರತಿ ತಿಂಗಳು ದಿನದ ಎರಡು ಅವಧಿ ನೀಡಲಾಗುತ್ತಿದೆ. 7 ಸರ್ವರ್​ಗಳು ಕಾರ್ಯನಿರ್ವಹಿಸುತ್ತವೆ. ಜನರು ಹೆಚ್ಚಾಗಿ ಎಲ್ಲ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ನಡೆಯುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತದೆ.

ಲತಾ ಉಪನಿರ್ದೇಶಕಿ, ಆಹಾರ ಇಲಾಖೆ, ಕೋಲಾರ.