ಹುಣಸೂರು ಡಿಸಿಎಫ್ ಕಚೇರಿಯಲ್ಲಿ ಪಿಸಿಸಿಎಫ್ ಬಿ.ಪಿ.ರವಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಡಿಸಿಎಫ್ ಪಿ.ಎ.ಸೀಮಾ, ಎಸಿಎಫ್ ಲಕ್ಷ್ಮೀಕಾಂತ್, ಅನನ್ಯಕುಮಾರ್ ಇತರರಿದ್ದಾರೆ. 
ಜಿಲ್ಲೆ

ಹುಲಿ ಹಾವಳಿ ತಡೆಗೆ ಗಂಭೀರ ಚಿಂತನೆ

ವಸಂತಕುಮಾರ್ ಬಿ

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಪ್ರದೇಶಗಳಲ್ಲಿ ವಿಪರೀತ ಹುಲಿ ಕಾಟದಿಂದ ರೈತರು, ಗ್ರಾಮಸ್ಥರು ತೊಂದರೆಗೊಳಗಾಗಿದ್ದು, ಹುಲಿ ದಾಳಿ ನಿಯಂತ್ರಣಕ್ಕೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎಂದು ಪಿಸಿಸಿಎಫ್ ಬಿ.ಪಿ.ರವಿ ತಿಳಿಸಿದರು.

ಹುಣಸೂರು ವನ್ಯಜೀವಿ ವಿಭಾಗದ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಬೇಟೆಯಾಡಲಾಗದ ಹುಲಿಗಳು ಹೊರ ಬರುತ್ತಿವೆ. ಈಗಾಗಲೇ ಒಂದು ಹುಲಿ ಸೆರೆ ಹಿಡಿಯಲು ಅನುಮತಿ ಸಿಕ್ಕಿದೆ. ಎಲ್ಲ 8ವಲಯಗಳಲ್ಲೂ ಹುಲಿ ಕಾಟವಿದೆ ಎಂದು ಡಿಸಿಎಫ್ ಪಿ.ಎ.ಸೀಮಾ ತಿಳಿಸಿದ್ದಾರೆ. ಹುಲಿಯ ಚಲನವಲನ ತಿಳಿಯಲು ಹುಲಿ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇಡುವುದು, ಕ್ಯಾಮರಾ ಅಳವಡಿಸುವುದು, ಹುಲಿಯ ಹೆಜ್ಜೆ ಗುರುತಿಸಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದ್ದು, ಹುಲಿದಾಳಿ ನಿಯಂತ್ರಣದ ಕುರಿತು ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಸ್ಥಳೀಯರ ಸಹಕಾರದೊಂದಿಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

ಒಕ್ಕಲೆಬ್ಬಿಸುವ ಕುರಿತು ಗೊಂದಲ: ಅರಣ್ಯದಂಚಿನಲ್ಲಿ 1980ಕ್ಕಿಂತ ಮೊದಲು ಸಾಗುವಳಿ ಮಾಡುತ್ತಿರುವ ರೈತರನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಒಕ್ಕಲೆಬ್ಬಿಸುವುದಿಲ್ಲ. ಆದರೆ ಸೂಕ್ತ ದಾಖಲಾತಿ ಒದಗಿಸಬೇಕು. ನಾಗರಹೊಳೆ ಉದ್ಯಾನದಂಚಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಹಾಗೂ ಅರಣ್ಯಇಲಾಖೆ ನಡುವಿನ ವಿವಾದದ ಬಗೆಗಿನ ಪ್ರಶ್ನೆಗೆ ಸುಪ್ರಿಂಕೋರ್ಟ್‌ನ ನಿರ್ದೇಶನದಂತೆ ಭೂಮಿ ತೆರವಿಗೆ ನೋಟಿಸ್ ನೀಡಲಾಗುತ್ತಿದೆ. ಇದರಲ್ಲಿ ಅರಣ್ಯ ಇಲಾಖೆಯ ಪಾತ್ರವಿಲ್ಲ. ರಾಜ್ಯದಲ್ಲಿ 19 ಸಾವಿರ ರೈತರ ಭೂಮಿ ವಿವಾದವಿದ್ದು, ಈಗಾಗಲೇ 15 ಸಾವಿರ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ. 1980ಕ್ಕಿಂತ ಮೊದಲು ಸಾಗುವಳಿ ಮಾಡುತ್ತಿರುವ ಬಗ್ಗೆ ದಾಖಲೆ ಒದಗಿಸಿದರೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆರು ಸಾವಿರ ಹುದ್ದೆ ಖಾಲಿ: ನಾಗರಹೊಳೆ ಉದ್ಯಾನದಲ್ಲಿ ಶೇ.50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದು, ನಿರ್ವಹಣೆಗೆ ತೊಡಕಾಗಿರುವ ಬಗೆಗಿನ ಪ್ರಶ್ನೆಗೆ ಅರಣ್ಯ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳಿವೆ. ಈ ಪೈಕಿ ಆರು ಸಾವಿರ ಹುದ್ದೆಗಳು ಖಾಲಿಯಿದೆ. ಈಗಾಗಲೇ 540 ಅರಣ್ಯರಕ್ಷಕರ ನೇಮಕ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ಎಂದರು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ಸಸಿ ನೆಡಲು ಬೆಳೆಸಬೇಕಿದ್ದ ನರ್ಸರಿ ಮಾಡಲು ಈವರೆಗೆ ಅನುದಾನ ಬಿಡುಗಡೆ ಮಾಡದಿರುವ ಹಾಗೂ 6 ಲಕ್ಷದಿಂದ 65 ಸಾವಿರ ಸಸಿಗೆ ಇಳಿಸಿರುವ ಪ್ರಶ್ನೆಗೆ ಅನುದಾನ ಬಿಡುಗಡೆಯ ಆಧಾರದಲ್ಲಿ ನರ್ಸರಿ ಮಾಡಲಾಗುವುದು. ಆದರೂ ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದರು.

ನಾಗರಹೊಳೆಯಿಂದ ಪುನರ್ವಸತಿಗೊಂಡ ಕೇಂದ್ರಗಳಲ್ಲಿ ಆದಿವಾಸಿಗಳು ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೇಳುವವರಿಲ್ಲದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂಬ ಮಾಹಿತಿಗೆಮ ಇದು ಗಂಭೀರ ಸಮಸ್ಯೆ. ಇಲಾಖೆಯ ಟೈಗರ್ ಫೌಂಡೇಶನ್‌ವತಿಯಿಂದ ಫೆಸಿಲಿಟೇಟರ್‌ಗಳನ್ನು ನೇಮಿಸಿಕೊಂಡು ಇವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಡಿಸಿಎಫ್ ಅವರಿಗೆ ಸೂಚನೆ ನೀಡಿದರು.

ಉದ್ಯಾನದ ಎಲ್ಲೆಡೆ ಲಂಟಾನ, ಸೆನ್ನಾ, ಯುಪಟೋರಿಯಂ, ಕಳೆಯಿಂದಾಗಿ ಸಸ್ಯಾಹಾರಿ ವನ್ಯಜೀವಿಗಳಿಗೆ ಆಹಾರ ಕೊರತೆ ಎದುರಾಗುವ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇವುಗಳ ನಿರ್ಮೂಲನೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಸಿಬ್ಬಂದಿ ನೆರವಿನಿಂದಲೇ ನಿರ್ಮೂಲನೆ ಮುಂದಾಗುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಪಿಸಿಸಿಎಫ್ ತಿಳಿಸಿದರು.

ಈ ವೇಳೆ ಕೊಡಗು ವೃತ್ತದ ಸಿ.ಎಫ್. ಸೋನಾಲ್‌ವೃಷಣಿ, ಡಿಸಿಎಫ್ ಸೀಮಾ, ಎಸಿಎಫ್ ಲಕ್ಷ್ಮಿಕಾಂತ್, ಅನನ್ಯಕುಮಾರ್, ಪ್ರೊಬೇಷನರಿ ಎಸಿಎಫ್ ಮಹಾಲಕ್ಷ್ಮಿ ಇತರರು ಇದ್ದರು.