ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಉದ್ಘಾಟಿಸಿದರು. ಆರ್‌ಡಿಎ ಆಯುಕ್ತ ಮಹೆಬೂಬ್ ಜಿಲಾನಿ, ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ, ಸಂಸ್ಥೆ ಕಾರ್ಯದರ್ಶಿ ಅತಾವುಲ್ಲಾ, ಪ್ರಾಧ್ಯಾಪಕರಾದ ಡಾ.ರವಿ ಮಸ್ಕಿ, ಡಾ.ತಿಮ್ಮಪ್ಪ ವಡ್ಡೆಪಲ್ಲಿ, ಮಹಾದೇವಪ್ಪ ಇದ್ದರು. 
ಜಿಲ್ಲೆ

ದುಶ್ಚಟಗಳಿಂದ ಮುಂದೆ ಗಂಭೀರ ಪರಿಣಾಮ

ರಾಚಯ್ಯ ಸ್ವಾಮಿ

ರಾಯಚೂರು: ದುಶ್ಚಟಗಳಿಂದ ಆಗಿನ ಸಂದರ್ಭಕ್ಕೆ ಸಂತೋಷ ದೊರೆತರೂ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತಿದ್ದು, ಯುವ ಜನತೆ ದುಶ್ಚಟಗಳಿಂದ ದೂರವಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್‌ನಿಂದ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಕೇಳುವ ವ್ಯವಧ್ಯಾನವಿಲ್ಲ. ಇದರಿಂದ ಜೀವನದಲ್ಲಿ ಎಡವುತ್ತಿದ್ದಾರೆ ಎಂದರು.
ರೆಡ್‌ಕ್ರಾಸ್ ಯುವಜನರಲ್ಲಿ ಸೇವಾ ಮನೋಭಾವ ರೂಢಿಸಬೇಕು ಎನ್ನುವ ನಿಟ್ಟಿನಲ್ಲಿ ಯುವ ರೆಡ್‌ಕ್ರಾಸ್ ಘಟಕಗಳನ್ನು ಕಾಲೇಜುಗಳಲ್ಲಿ ಆರಂಭಿಸಿದೆ. ಜತೆಗೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತರಗತಿಯನ್ನು ಸಂಸ್ಥೆಯಿಂದ ನೀಡಲಾಗುತ್ತಿದೆ ಎಂದು ಹೇಳಿದರು.
ಆರ್‌ಡಿಎ ಆಯುಕ್ತ ಮಹೆಬೂಬ್ ಜಿಲಾನಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನರು ದೇಶಕ್ಕೆ ಶಕ್ತಿಯಾಗಬೇಕೆ ಹೊರತು ಹೊರೆಯಾಗಬಾರದು ಎಂದು ತಿಳಿಸಿದರು.
ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಯುವ ರೆಡ್‌ಕ್ರಾಸ್ ನೋಡಲ್ ಅಕಾರಿ ಡಾ.ರವಿ ಮಸ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಇಶ್ರತ್ ಬೇಗಂ, ಡಾ.ತಿಮ್ಮಪ್ಪ ವಡ್ಡೆಪಲ್ಲಿ, ಮಿನಾವುಲ್ ಹಸನ್, ಮಹಾದೇವಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.