ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಸಂಸದ ಡಾ ಕೆ.ಸುಧಾಕರ್ ಸ್ವಾರ್ಥ ನಡೆ, ರಾಜ್ಯಾಧ್ಯಕ್ಷರ ವಿರುದ್ಧದ ಟೀಕೆ, ಜಿಲ್ಲಾಧ್ಯಕ್ಷರ ನೇಮಕಕ್ಕೆ ಅಪಸ್ವರ ವ್ಯಕ್ತಪಡಿಸುತ್ತಿರುವುದನ್ನು ಪ್ರಸ್ತಾಪಿಸಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲಿನಿಂದಲೂ ಬಿಜೆಪಿಯನ್ನು ಸಂಘಟಿಸಲಾಗುತ್ತಿದೆ. ಇಲ್ಲಿ ಯಾರೂ ಅನಿವಾರ್ಯವಲ್ಲ. ಆದರೆ, ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ಸುಧಾಕರ್ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಅರಿಯದೇ ಮಾತನಾಡುತ್ತಿದ್ದಾರೆ. ಇದು ಏನು ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಶಿಡ್ಲಘಟ್ಟದಲ್ಲಿ ರವಿಕುಮಾರ್ ಹಾಗೂ ಚಿಂತಾಮಣಿಯಲ್ಲಿ ಜೆ.ಕೆ.ಕೃಷ್ಣಾ ರೆಡ್ಡಿ, ದೇವನಹಳ್ಳಿಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಪರ ಸಂಸದರು ಕೆಲಸ ಮಾಡಿದರು. ಗೌರಿಬಿದನೂರಿನಲ್ಲಿ ಪುಟ್ಟಸ್ವಾಮಿ ಗೌಡರನ್ನು ಬೆಂಬಲಿಸಿದರು. ಹೀಗೆ ಬಹುತೇಕ ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ಯಾವ ಪಕ್ಷ ಸಂಘಟನೆ?. ಈಗ ಬಾಗೇಪಲ್ಲಿಯಲ್ಲಿ ಎನ್ ಡಿಎ ಅಭ್ಯರ್ಥಿಯನ್ನಾಗಿ ಹರಿನಾಥ ರೆಡ್ಡಿಯನ್ನು ಬಿಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. .
ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿ ಸೋತರೂ 60 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯಲಾಗಿದೆ. ಇಲ್ಲಿ ಪಕ್ಷ ಸಂಘಟನೆಯ ಮೂಲಕ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಾಗಿದೆ. ಆಗ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದರೂ ಸಂಸದರು ಬರಲಿಲ್ಲ. ಬೆಂಬಲಕ್ಕಾಗಿ ಅವರ ಕಾಲಿಗೆ ಬಿದ್ದಷ್ಟು ಸಲ ತಂದೆ ತಾಯಿಗೂ ಬಿದ್ದಿಲ್ಲ. ಆದರೆ, ಒಂದು ದಿನವೂ ಬರಲಿಲ್ಲ. ಬದಲಿಗೆ ಮುಖಂಡ ಕೋನಪ್ಪ ರೆಡ್ಡಿಯನ್ನು ಕರೆದುಕೊಂಡು ಬಂದು ವಿರೋಧಿ ಹೇಳಿಕೆಗಳನ್ನು ಕೊಡಿಸಿ ಗೊಂದಲ ಸೃಷ್ಟಿಸಿದರು. ಸಂಸದರು ಬಾಗೇಪಲ್ಲಿ ಶಾಸಕರ ಪಾಲುದಾರರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಮಾತೃಪಕ್ಷದ ವಿರುದ್ಧ ಕೆಲಸ ಮಾಡಿ, ಕಾಂಗ್ರೆಸ್ ಗೆಲ್ಲಿಸಿದರು. ಇದರ ನಡುವೆಯೂ ಪಕ್ಷವು ಒಳ್ಳೆಯ ಮತಗಳನ್ನು ಪಡೆಯಿತು. ಇದೆಲ್ಲದರ ಬೆಳವಣಿಗೆಗಳ ಬಗ್ಗೆ ಪಕ್ಷದ ಹೈಕಮಾಂಡ್ ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಭಿನ್ನಾಭಿಪ್ರಾಯವನ್ನು ಮರೆತು ಪ್ರಚಾರ ಕೈಗೊಳ್ಳಲಾಯಿತು. ಹಾಗೆಯೇ ಗೆಲ್ಲಿಸಿಕೊಂಡು ಬರಲಾಯಿತು. ವ್ಯಕ್ತಿ ಸಿದ್ಧಾಂತಕ್ಕಿ0ತಲೂ ಪಕ್ಷ ನಿಷ್ಠೆ ಮುಖ್ಯ. ಸಚಿವರು, ಸಂಸದರನ್ನಾಗಿಸಿದ ಪಕ್ಷದ ಸಂಘಟನೆಗೆ ಜಿಲ್ಲೆಯಲ್ಲಿ ಅವರು ಏನು ಮಾಡಿದ್ದಾರೆ?. ವೈಯಕ್ತಿಕ ಬಲವರ್ಧನೆಯಲ್ಲಿ ಕಾಲ ಕಳೆದಿದ್ದಾರೆ. ಸಚಿವರಾಗಿದ್ದಾಗ ಸ್ವಪಕ್ಷೀಯ ನಿಷ್ಠಾವಂತರಿಗೆ ಬೆಲೆ ಕೊಡಲಿಲ್ಲ. ಮನೆಯ ಆವರಣದಲ್ಲಿ ಗಂಟೆಗಟ್ಟಲೇ ನಿಲ್ಲಿಸಿ, ಬಳಿಕ ಸಿಗದೇ ವಾಪಸ್ ಕಳುಹಿಸಿದರು. ಇದರ ಬಗ್ಗೆ ಮೂಲ ಬಿಜೆಪಿಗರು ಈಗಲೂ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಯುವ ನಾಯಕ ಬಿ.ಸಂದೀಪ್ ರೆಡ್ಡಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಇದಕ್ಕೆ ಸಂಸದರು ಏಕೆ ಭಯ ಬೀಳಬೇಕು?.ಪಕ್ಷವನ್ನು ಸಂಘಟಿಸಿದರೆ ಅವರಿಗೆ ಏನು ನಷ್ಟ? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಂದೀಪ್ ರೆಡ್ಡಿ ಮತ್ತಿತರರು ಇದ್ದರು.