ಜಿಲ್ಲೆ

ಸರ್ಕಾರಿ ನೌಕರರ ವಸತಿ ಸಮುಚ್ಚಯದಲ್ಲಿ ಸರಣಿ ಕಳ್ಳತನ

ಗೋಪಾಲಕೃಷ್ಣ ಪಾದೂರ್

ಉಡುಪಿ: ಬೈಲೂರು ವಾರ್ಡಿನ ಮಿಷನ್​ ಕಂಪೌಂಡ್​ ಜಂಕ್ಷನ್​ ಬಳಿ ಕಂದಾಯ ಇಲಾಖೆಯ ಸಿ ದರ್ಜೆ ನೌಕರರ ವಸತಿ ಸಮುಚ್ಚಯದ ಆರು ಮನೆಗೆ ಭಾನುವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಭರಣ ದೋಚಿದ್ದಾರೆ.

ನಗರ ಠಾಣೆಯಿಂದ ಸುಮಾರು 100 ಮೀ ದೂರದಲ್ಲಿರುವ ವಸತಿ ಸಮುಚ್ಚಯದಲ್ಲಿ ಸರ್ಕಾರಿ ನೌಕರರು, ಕುಟುಂಬ ವಾಸವಿದ್ದಾರೆ. ರಜೆ ಹಿನ್ನೆಲೆಯಲ್ಲಿ ಅನೇಕ ಮಂದಿ ಊರಿಗೆ ತೆರಳಿದ್ದು, ಬೀಗ ಹಾಕಿದ್ದ ಆರು ಮನೆಯ ಬಾಗಿಲಿನ ಚಿಲಕನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು, ಮನೆಯ ಕಪಾಟನ್ನು ಚೆಲ್ಲಾಪಿಲ್ಲಿಯಾಗಿಸಿ, ಒಂದು ಮನೆಯಲ್ಲಿ ಸುಮಾರು 120 ಗ್ರಾಂ ಚಿನ್ನ, 20 ಸಾವಿರ ನಗದು, ಮತ್ತೊಂದು ಮನೆಯಲ್ಲಿ 20 ಸಾವಿರ ನಗದು ಒಯ್ದಿದ್ದಾರೆ. ಉಳಿದ ಮೂರು ಮನೆಯಲ್ಲಿ ಕಳ್ಳತನ ಯತ್ನ ವಿಫಲವಾಗಿದೆ.

ಸಿಸಿಟಿವಿ, ದಾರಿದೀಪವಿಲ್ಲ
ಜಿಲ್ಲಾಡಳಿತವೇ ನಿರ್ವಹಣೆ ಮಾಡುತ್ತಿರುವ ವಸತಿ ಸಮುಚ್ಚಯದ ಆವರಣದಲ್ಲಿ 34 ಕುಟುಂಬಗಳು ವಾಸವಿದ್ದು, ಭದ್ರತೆ ದೃಷ್ಟಿಯಿಂದ ಕಟ್ಟಡದಲ್ಲಿ ಸಿಸಿಟಿವಿ ಅಳವಡಿಸಿಲ್ಲ. ಆವರಣದೊಳಗೆ ಇರುವ ವಿದ್ಯುತ್​ ಕಂಬದಲ್ಲಿನ ದಾರಿ ದೀಪಗಳು ಕೆಟ್ಟುಹೋಗಿವೆ. ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕ ಸೋಮವಾರ ಬೆಳಗ್ಗೆ ಪೋಲಿಸ್​, ನಗರಸಭಾ ಸದಸ್ಯರ ಮುತುವರ್ಜಿಯಲ್ಲಿ ದಾರಿ ದೀಪವನ್ನು ಹಾಕಲಾಗಿದೆ.

ಬಕೆಟ್​ನಲ್ಲಿಟ್ಟ ಚಿನ್ನ ಸೇಫ್​

ನೌಕರರೊಬ್ಬರು ರಜೆಗೆ ಊರಿಗೆ ತೆರಳುವಾಗ ಮನೆಯಲ್ಲಿದ್ದ ಚಿನ್ನಾಭರಣವನ್ನು ಬಟ್ಟೆಯಲ್ಲಿ ಕಟ್ಟಿ, ಬಕೆಟ್​ನೊಳಗೆ ಇಟ್ಟಿದ್ದರು. ಹೀಗಾಗಿ ಮನೆಗೆ ನುಗ್ಗಿದ ಕಳ್ಳರಿಗೆ ಇದು ತಿಳಿಯದೇ ಉಳಿದುಕೊಂಡಿದೆ.
ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಪಿ.ಎ ಹೆಗಡೆ, ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಸದಸ್ಯರಾದ ರಮೇಶ್​ ಕಾಂಚನ್​, ಬಾಲಕೃಷ್ಣ ಶೆಟ್ಟಿ ನಿಟ್ಟೂರು ಮೊದಲಾದವರು ಭೇಟಿ ನೀಡಿದ್ದಾರೆ.