ಜಿಲ್ಲೆ

ಬಂಡೀಪಾಳ್ಯದ ಎಪಿಎಂಸಿಯಲ್ಲಿ ಸರಣಿ ಕಳ್ಳತನ

ಮೈಸೂರು: ಬಂಡೀಪಾಳ್ಯದ ಎಪಿಎಂಸಿ ಆವರಣದಲ್ಲಿ ಮೂರು ಮಳಿಗೆಗಳ ರೋಲಿಂಗ್ ಷಟರ್ ಮೀಟಿ ಒಳ ನುಗ್ಗಿದ ಕಳ್ಳರು 1.60 ಲಕ್ಷ ರೂ. ನಗದು, 20 ಮೂಟೆ ಅಕ್ಕಿ ದೋಚಿ ಪರಾರಿಯಾಗಿದ್ದಾರೆ.

ಮಹಿಂದ್ರಾ ಮಿನಿ ಗೂಡ್ಸ್ ವಾಹನದಲ್ಲಿ ಬಂದಿರುವ ಮೂವರು ಕಳ್ಳರು, ತಾಜ್ ಎಂಟರ್ ಪ್ರೈಸಸ್ ಅಂಗಡಿಯ ರೋಲಿಂಗ್ ಷಟರ್‌ಅನ್ನು ಕಬ್ಬಿಣದ ರಾಡು, ಮರದ ಕಂಬಗಳಿಂದ ಮೀಟಿ ಅಂಗಡಿ ಒಳಗೆ ನುಗ್ಗಿದ್ದಾರೆ. ಕ್ಯಾಶ್ ಟೇಬಲ್ ಬೀಗ ಒಡೆದು ಅದರಲ್ಲಿ ಇಟ್ಟಿದ್ದ ಸುಮಾರು 1.60 ಲಕ್ಷ ರೂ. ನಗದು ದೋಚಿದ್ದಾರೆ. ಹಣಕ್ಕಾಗಿ ಎಳ್ಳಿನ ಮೂಟೆಯನ್ನು ಚೆಲ್ಲಾಡಿ ಹಣ ಸಿಗದಿದ್ದಾಗ ಕ್ಯಾಶ್ ಟೇಬಲ್ ಅನ್ನು ಕಾಳುಗಳ ಮೂಟೆಯ ಮೇಲೆ ಎಸೆದು ಹೋಗಿದ್ದಾರೆ.

ಬಳಿಕ ಪಕ್ಕದ ರಾಘವೇಂದ್ರ ಟ್ರೇಡಿಂಗ್ ಕಂಪನಿ ಅಂಗಡಿಯ ರೋಲಿಂಗ್ ಷಟರ್ ಮೀಟಲು ಯತ್ನಿಸಿ ಅದು ಅಸಾಧ್ಯವಾದಾದಾಗ ಮತ್ತೊಂದು ಅಕ್ಕಿ ಅಂಗಡಿಯ ರೋಲಿಂಗ್ ಷಟರ್ ಮೀಟಿ ಒಳ ನುಗ್ಗಿದ್ದಾರೆ. ಅಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಅಕ್ಕಿ ಮೂಟೆಗಳನ್ನು ವಾಹನಕ್ಕೆ ಹಾಕಿಕೊಂಡಿದ್ದಾರೆ. ಕಳ್ಳರು ಅಕ್ಕಿ ಅಂಗಡಿಗೆ ನುಗ್ಗಿ ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಂಗಡಿಗೆ ನುಗ್ಗಿದ ಮೂವರು ಕಳ್ಳರು, ಕ್ಯಾಶ್ ಟೇಬಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಉರ್ದು ಭಾಷೆಯಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಿರುವ ಮಾತುಗಳು ಸಹ ಸ್ಪಷ್ಟವಾಗಿ ದಾಖಲಾಗಿದೆ. ನಂಜನಗೂಡಿನಲ್ಲಿಯೂ ಇದೇ ಮಾದರಿ ಕಳ್ಳತನವಾಗಿದ್ದು, ಅದೇ ತಂಡ ಈ ಕೃತ್ಯವೆಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಮೈಸೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭದ್ರತೆ ನೀಡುವಲ್ಲಿ ವಿಫಲ:

ಬಂಡಿಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿ ಈ ಹಿಂದೆಯೂ ಹಲವು ಕಳ್ಳತನಗಳು ನಡೆದಿದ್ದು, ಭದ್ರತೆಯನ್ನು ಹೆಚ್ಚಿಸಿಲ್ಲ. ಕಾವಲುಗಾರರು ಇದ್ದರೂ, ಸರಿಯಾಗಿ ಗಸ್ತು ನಡೆಸುವುದಿಲ್ಲ. ಪೊಲೀಸರು ಸಹ ಗಸ್ತು ಬಂದರೂ ಕಳ್ಳತನ ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ಅಂಗಡಿ ಮಾಲೀಕರು ದೂರಿದ್ದಾರೆ.

ಈ ಹಿಂದೆಯೂ ಕಳ್ಳರು ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ, ಪೊಲೀಸರು ಕಳ್ಳರನ್ನು ಬಂಧಿಸಿಲ್ಲ. ಮುಂದಾದರೂ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಬೇಕು. ಕಳ್ಳತನ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.