ಹುಬ್ಬಳ್ಳಿ : ತವರಿಗೆ ಬಾ ತಂಗಿ, ಅಣ್ಣ ತಂಗಿ ಸೇರಿದಂತೆ ವಿವಿಧ ಯಶಸ್ವಿ ಸಿನೆಮಾಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಸಾಯಿಪ್ರಕಾಶ ಅವರ 105ನೇ ಕನ್ನಡ ಚಲನಚಿತ್ರ ‘ಸೆಪ್ಟೆಂಬರ್ 10’ ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜುಲೈ ಎರಡನೇ ವಾರದಲ್ಲಿ ಬಿಡುಗಡೆಗೊಳ್ಳಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ನಿರ್ದೇಶಕ ಸಾಯಿಪ್ರಕಾಶ, ಸೆ. 10 ವಿಶ್ವ ಆತ್ಮಹತ್ಯೆ ತಡೆ ದಿನ. ಈ ಚಿತ್ರದಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಸಂದೇಶ ನೀಡಲಾಗಿದೆ. ಅದೇ ಕಾರಣಕ್ಕೆ ಚಿತ್ರಕ್ಕೆ ಸೆಪ್ಟೆಂಬರ್ 10 ಎಂಬ ಹೆಸರಿಡಲಾಗಿದೆ ಎಂದರು.
ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿ ಇ. ರಾಜಮ್ಮ ಸಾಯಿಪ್ರಕಾಶ ಅವರು ಚಿತ್ರವನ್ನು ನಿರ್ವಿುಸಿದ್ದಾರೆ. ದುರ್ಬಲ ಹಾಗೂ ಸಂಕುಚಿತ ಮನಸ್ಸಿನವರಿಗೆ ಉತ್ತಮ ಸಂದೇಶ ಹಾಗೂ ಮಾರ್ಗದರ್ಶನ ನೀಡುವ ಪ್ರಯತ್ನ ಈ ಸಿನಿಮಾ ಮೂಲಕ ಮಾಡಲಾಗಿದೆ ಎಂದರು.
2020ರ ಸೆಪ್ಟೆಂಬರ್ 10 ರಂದು ಚಿತಿ್ರೕಕರಣ ಆರಂಭವಾಗಿದೆ. ಬೆಂಗಳೂರಿನ ಸುತ್ತ್ತನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ರೈತರು, ವಿದ್ಯಾರ್ಥಿಗಳು, ಸಿರಿವಂತರು ಒತ್ತಡಕ್ಕೆ ಒಳಗಾಗಿ ಜೀವನದಲ್ಲಿ ಸೋಲು ಕಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಇಂತವರಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ, ಸಮಸ್ಯೆಗಳಿಗೆ ಬೇರೆ ಪರಿಹಾರಗಳು ಇವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ಈ ಸಿನೆಮಾದ ಉದ್ದೇಶವಾಗಿದೆ ಎಂದು ತಿಳಿಸಿದರು.
ವೈದ್ಯರು ಸಹ ಈ ಸಿನೆಮಾವನ್ನು ಮೆಚ್ಚಿದ್ದಾರೆ. ಜೀವನದಲ್ಲಿ ನಿರಾಸೆಗೊಂಡವರು ಈ ಚಿತ್ರ ವೀಕ್ಷಿಸಿದರೆ ಅವರ ಮನಸ್ಸು ಬದಲಾಗುತ್ತದೆ ಎಂಬ ಸಲಹೆಯನ್ನೂ ವೈದ್ಯರು ನೀಡಿದ್ದಾರೆ ಎಂದರು.
ಸಿನಿಮಾಗೆ ನನ್ನ ಚಿತ್ರಕಥೆ, ಡಾ.ವಿ. ನಾಗೇಂದ್ರಪ್ರಸಾದ್ ಸಂಗೀತ, ಜೆ.ಜಿ. ಕೃಷ್ಣ ಅವರ ಛಾಯಾಗ್ರಹಣ, ಬಿ.ಎ. ಮಧು ಅವರ ಸಂಭಾಷಣೆ ಸಿನೆಮಾಕ್ಕೆ ಇದೆ. ಹಿರಿಯ ಕಲಾವಿದರಾದ ರಮೇಶ ಭಟ್, ಶಶಿಕುಮಾರ, ಶ್ರೀನಿವಾಸಮೂರ್ತಿ, ರವೀಂದ್ರನಾಥ ಶಿವಕುಮಾರ, ಗಣೇಶರಾವ್ ಕೇಸರಕರ್, ಸಿಹಿಕಹಿ ಚಂದ್ರು, ಪದ್ಮಾ ವಾಸಂತಿ, ಅನಿತಾರಾಣಿ, ಶ್ರೀರಕ್ಷಾ, ಜಯಸಿಂಹ ತಾರಾಗಣದಲ್ಲಿ ಇದ್ದಾರೆ ಎಂದು ಹೇಳಿದರು.
ಗಣೇಶರಾವ್ ಕೇಸರಕರ್, ಜಯಸಿಂಹ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.