ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಗೊಂಡಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಸೋಮವಾರ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಶೀಲಮ್ಮ ಉದ್ಘಾಟಿಸಿದರು. ಕೃಷ್ಣ, ಸೌಮ್ಯಾ, ನಿಂಗರಾಜು, ಮಹದೇವಸ್ವಾಮಿ, ರಾಜಮ್ಮ, ರಮ್ಯಾ, ಮಮತಾ ಇದ್ದರು.  
ಜಿಲ್ಲೆ

ಮೂಲದಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

ರವಿಕುಮಾರ್ ಪಿ. ಕೆ

ಮಳವಳ್ಳಿ: ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪರಿಸರ ಸ್ವಚ್ಛತೆಯೇ ಮೂಲವಾಗಿರುವುದರಿಂದ ಗ್ರಾಮೀಣ ಪ್ರದೇಶಗಳ ನಿವಾಸಿಗಳು ಹಸಿ-ಒಣ ಕಸವನ್ನು ಬೇರ್ಪಡಿಸಿ ಕಸ ವಿಲೇವಾರಿ ವಾಹನಗಳಿಗೆ ನೀಡುವ ಮೂಲಕ ಸಹಕರಿಸುವಂತೆ ಸಂಜೀವಿನಿ ಒಕ್ಕೂಟದ ತಾಲೂಕು ವ್ಯವಸ್ಥಾಪಕಿ ಸೌಮ್ಯಾ ತಿಳಿಸಿದರು.

ತಾಲೂಕಿನ ಟಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಗೊಂಡಿರುವ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ 39 ಗ್ರಾಪಂಗಳ ವ್ಯಾಪ್ತಿಯಲ್ಲೂ ಕಸ ವಿಲೆವಾರಿ ನಿರ್ವಹಣೆಗಾಗಿ ನಮ್ಮ ಒಕ್ಕೂಟವೂ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಕಸ ವಿಲೇವಾರಿ ನಿರ್ವಹಣೆಯನ್ನು ಮಹಿಳೆಯರೇ ಮಾಡಲಿದ್ದಾರೆ. ಈ ಕಾರ್ಯಕ್ರಮ ಜಾರಿಯಾಗಿ ಒಂದು ವರ್ಷ ಕಳೆದಿದ್ದು, ಹಲವು ತಾಂತ್ರಿಕ ಸಮಸ್ಯೆಗಳಿಂದ ಜಾರಿಯಾಗಿರಲಿಲ್ಲ. ತಾಪಂ ಇಒ ಶ್ರೀನಿವಾಸ್ ಅವರು ಆಸಕ್ತಿ ವಹಿಸಿ ಕಸ ವಿಲೇವಾರಿ ಕಾರ್ಯಕ್ಕೆ ಇರುವ ತೊಡಕುಗಳ ನಿವಾರಣೆಗೆ ಮುಂದಾಗಿದ್ದರ ಪರಿಣಾಮ ಯಶಸ್ವಿಯಾಗಿ ಪ್ರಾರಂಭಿಸಲು ಕಾಲ ಕೂಡಿಬಂದಿದೆ ಎಂದು ಶ್ಲಾಘಿಸಿದರು.

ವಾರದ ನಿಗದಿತ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿ ಮನೆ ಬಾಗಿಲಿಗೆ ವಾಹನದಲ್ಲಿ ಬರುತ್ತಾರೆ. ಎಲ್ಲೆಂದರಲ್ಲಿ ಕಸವನ್ನು ಬಿಸಾಡದೆ ಒಂದೆಡೆ ಶೇಖರಣೆ ಮಾಡಿಕೊಂಡು ನಮ್ಮ ಸದಸ್ಯರಿಗೆ ಹಸಿ, ಒಣ ಕಸವನ್ನು ವಿಂಗಡಣೆ ಮಾಡಿ ಕೊಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು. ಇದರಿಂದ ಗ್ರಾಮವೂ ಸ್ವಚ್ಛವಾಗಿರುವುದರ ಜತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಈಗಾಲೇ ತಾಲೂಕಿನ ಕಿರುಗಾವಲು ಸೇರಿದಂತೆ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಕಾರ್ಯಾರಂಭವಾಗಿದ್ದು, ಇಂದು ಟಿ.ಕೆ.ಹಳ್ಳಿ ಗ್ರಾಪಂ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಒಕ್ಕೂಟದ ಮಹಿಳಾ ಸದಸ್ಯರಿಗೆ ಈಗಾಗಲೇ ಗೂಡ್ಸ್ ವಾಹನ ಚಾಲನಾ ತರಬೇತಿ ಕೊಡಿಸಲಾಗಿದ್ದು, ಇವರು ಗ್ರಾಪಂ ವ್ಯಾಪ್ತಿಯ ದಿನಕ್ಕೊಂದು ಗ್ರಾಮಕ್ಕೆ ತೆರಳಿ ಕಸ ಸಂಗ್ರಹಣೆ ಮಾಡುವ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದ ಅವರು, ಮುಂದಿನ ಕೆಲವೇ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕಸ ವಿಲೇವಾರಿ ನಿರ್ಹಣೆ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಶೀಲಮ್ಮ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಎನ್‌ಆರ್‌ಎಲ್ ವ್ಯವಸ್ಥಾಪಕ ಕೃಷ್ಣ, ತಾಲೂಕು ಮಟ್ಟದ ಮೇಲ್ವಿಚಾರಕರಾದ ನಿಂಗರಾಜು, ಮಹದೇವಸ್ವಾಮಿ, ಕಸ ವಿಲೇವಾರಿ ನಿರ್ವಹಣೆಯ ಗೂಡ್ಸ್ ವಾಹನ ಚಾಲಕಿಯರಾದ ರಾಜಮ್ಮ, ರಮ್ಯಾ, ಮಮತಾ ಸೇರಿದಂತೆ ಇತರರಿದ್ದರು.