ಜಿಲ್ಲೆ

ಮೂಲದಲ್ಲಿಯೇ ತ್ಯಾಜ್ಯ ವಿಂಗಡಿಸಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಹೇಳಿದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ, ರೈಲ್ವೆ, ವಾಯವ್ಯ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ತ್ಯಾಜ್ಯ ನಿರ್ವಹಣೆಗೆ ಅವಶ್ಯಕವಾಗಿರುವ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಲು ಯತ್ನಿಸಬೇಕು. ಗೋಡೆಗಳಿಗೆ ಪೋಸ್ಟರ್ ಅಂಟಿಸದಂತೆ ಕ್ರಮ ಕೈಗೊಳ್ಳಬೇಕು. ಡಿಜಿಟಲ್ ಜಾಹೀರಾತು ಫಲಕಗಳಿಗೆ ಆದ್ಯತೆ ನೀಡಬೇಕು. ಫುಟ್​ಪಾತ್ ಮೇಲೆ ವಾಹನಗಳನ್ನು ನಿಲ್ಲಿಸದಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿ ಮನೆಯಲ್ಲೂ ಕಸವನ್ನು ವಿಂಗಡಣೆ ಮಾಡುವಂತೆ ಜಾಗೃತಿ ಮೂಡಿಸಬೇಕು. ಅಲ್ಲದೇ ಸ್ವಯಂ ಸೇವಕರನ್ನು ನೇಮಿಸಿ, ಅವರಿಂದ ಉತ್ತಮ ಸೇವೆ ತೆಗೆದುಕೊಳ್ಳಿ ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಶಾಲೆ, ಕಾಲೇಜುಗಳಲ್ಲಿ ಕಸವನ್ನು ವಿಂಗಡಿಸಿ, ವಿಲೇವಾರಿ ಮಾಡಲು ತಿಳಿವಳಿಕೆ ನೀಡಬೇಕಿದೆ ಎಂದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.