ಹುನಗುಂದ ನಾಗಲಿಂಗ ನಗರದ ಬರ್ಡ್ಸ ಸಂಸ್ಥೆಯ ಸಭಾಭವನದಲ್ಲಿ ವಾಕ್ ಮತ್ತು ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸವಿತಾ ಕಾಳೆ, ಸುರೇಶ ಸೂಳೇಭಾವಿ, ಮಹಾಂತೇಶ ಅಗಸಿಮುಂದಿನ, ಪ್ರವೀಣ ಅಗಸಿಮುಂದಿನ, ಸಿ.ಜಿ. ಹವಾಲ್ದಾರ ಮತ್ತಿತರರಿದ್ದಾರೆ. 
ಜಿಲ್ಲೆ

ವಿಕಲಚೇತನರ ಸಾಧನೆಗೆ ಪ್ರತ್ಯೇಕ ಶಾಲೆ ಅವಶ್ಯ

ಹುನಗುಂದ: ಹಲವಾರು ಸಮಸ್ಯೆಗಳಿಂದ ಬೆಳವಣಿಗೆಯಲ್ಲಿ ಕುಂಠಿತವಾದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪಾಲಕರು, ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕಡ್ಡಾಯವಾಗಿ ಶ್ರಮಿಸಬೇಕು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಸವಿತಾ ಕಾಳೆ ಹೇಳಿದರು.

ಪಟ್ಟಣದ ನಾಗಲಿಂಗ ನಗರದ ಬರ್ಡ್ಸ ಸಂಸ್ಥೆಯ ಸಭಾಭವನದಲ್ಲಿ ಎಕ್ಷಿಲೊ ಪಿನ್ ಸರ್ವ ಬಾಂಬೆ ಹಾಗೂ ಬಿಜಾಪೂರ ಇಂಟಿಗ್ರೇಟೆಡ್ ರೂರಲ್ ಡೆವಲಪಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಾಕ್ ಮತ್ತು ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾನ್ಯ ಮಕ್ಕಳ ಕಲಿಕಾ ಕ್ರಮ ಮತ್ತು ವಿಕಲಚೇತನ ಮಕ್ಕಳ ಕಲಿಕಾ ಕ್ರಮ ಬೇರೆಯಾಗುವದರಿಂದ, ಇವರಿಗೆ ಪ್ರತ್ಯೇಕ ಶಾಲೆಯಾದರೆ ಮಾತ್ರ ಸಾಧನೆಗೆ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಪಾಲಕರು ಕಷ್ಟವಾದರೂ ಸಂಜ್ಞಾ ಭಾಷಾ ಶಾಲೆಗಳಿರುವ ಕಡೆ ತಮ್ಮ ಮಕ್ಕಳನ್ನು ಓದಿಸಿ ಅವರ ಬದುಕಿಗೆ ಸಹಕರಿಸಬೇಕು ಎಂದರು.

ಬಿಆರ್‌ಸಿ ಸುರೇಶ ಸೂಳೇಭಾವಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಸಿ.ಜಿ. ಹವಾಲ್ದಾರ, ಸಂಸ್ಥೆಯ ಸಿಇಒ ಪ್ರವೀಣ ಉಪಸ್ಥಿತರಿದ್ದರು. ಬೆಂಗಳೂರಿನ ಸಂಜ್ಞಾ ತಜ್ಞ ಶಿಕ್ಷಕ ರವಿ ರಾಮಪ್ಪ, ಲಕ್ಷಮೇಶ್ವರ ಬಿಡಿ ತಟ್ಟಿ ಮೆಮೊರಿಯಲ್ ಟ್ರಸ್ಟ್ ಶಿಕ್ಷಕರು ಶಿಬಿರದಲ್ಲಿ ಸಂಜ್ಞಾ ಭಾಷೆ ಕುರಿತು ತರಬೇತಿ ನೀಡಿದರು.

ಬೆಳಗ್ಗೆಯಿಂದ ಸಂಜೆವರೆಗೆ ಯೋಗ, ಪ್ರಾರ್ಥನೆ, ವ್ಯಾಯಾಮ, ಸ್ವೀಪ್ ತೆರೇಪಿ, ಲಿಪ್ ಲಾಂಗ್ವೇಜ್, ಡ್ರಾಯಿಂಗ್, ಪೇಪರ ಕಟಿಂಗ್, ಆಟಗಳನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಪ್ರಮಾಣ ಪತ್ರ ನೀಡಲಾಯಿತು. ಶಿಬಿರದಲ್ಲಿ 35 ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದರು. ಸಂಸ್ಥಾಪಕ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಸ್ವಾಗತಿಸಿದರು. ಕಾವ್ಯಾ ಅಗಸಿಮುಂದಿನ ನಿರೂಪಿಸಿ ವಂದಿಸಿದರು.