ಬೆಂಗಳೂರು: ನೀರಿನ ಸಮಸ್ಯೆ ಇರುವ ಕ್ಷೇತ್ರಗಳ ಶಾಸಕರ ಜತೆ ಪ್ರತ್ಯೇಕ ಚರ್ಚೆ ನಡೆಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಜೆಡಿಎಸ್ನ ಕೆ.ಎಸ್.ಲಿಂಗೇಶ್ ಮತ್ತಿತರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅನೇಕರು ಸರ್ಕಾರದ ಮೇಲೆ ಒತ್ತಡ ಹೇರಿ ನೀರಿನ ಮೂಲವಿಲ್ಲದಿದ್ದರೂ ಹತ್ತಾರು ಕೋಟಿ ರೂ.ಗಳ ಯೋಜನೆ ಮಂಜೂರು ಮಾಡಿಸಿಕೊಂಡಿದ್ದಾರೆ. ಸಾಕಷ್ಟು ಹಣವೂ ಖರ್ಚು ಮಾಡಿದ್ದಾರೆ. ಆದರೆ, ನೀರಿನ ಮೂಲಗಳೇ ಇಲ್ಲ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಸರ್ಕಾರದ ಹೊಣೆ. ಸಮಸ್ಯೆ ಇರುವ ಶಾಸಕರು ಬಂದು ರ್ಚಚಿಸಿ, ಸಮಸ್ಯೆ ಬಗೆಹರಿಸೋಣ ಎಂದರು. ಸಿಎಂ ಈಗಾಗಲೇ ಬರ ಇರುವ ಕ್ಷೇತ್ರಗಳಿಗೆ 50 ಲಕ್ಷ ರೂ. ಕೊಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅವರ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಲಿಂಗೇಶ್, ಬೇಲೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಲಧಾರೆ ಯೋಜನೆಯಡಿ ಅನುದಾನ ಕೊಡಿ ಎಂದು ಒತ್ತಾಯಿಸಿದರು. ಲಿಂಗೇಶ್ ಮಾತಿಗೆ ದನಿಗೂಡಿಸಲು ಎಚ್.ಡಿ. ರೇವಣ್ಣ ಎದ್ದು ನಿಂತಾಗ ಸ್ಪೀಕರ್, ನಿಮ್ಮನ್ನು ಯಾವ ಕಾನೂನಿನಡಿ ನಿಯಂತ್ರಣ ಮಾಡಲಿ ಎಂದು ಕಾಲೆಳೆದರು. ಮಧ್ಯ ಪ್ರವೇಶಿಸಿದ ರಮೇಶ್ಕುಮಾರ್, ಆ ಧೈರ್ಯ ನಿಮಗಿದೆಯೆ? ಅಂತಹ ಪ್ರಯತ್ನ ಮಾಡಬೇಡಿ ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ನಮಗೆ ಕಾನೂನು ಗೊತ್ತಿಲ್ಲ. ನೀವೇ ರಕ್ಷಿಸಬೇಕೆಂದು ಸ್ಪೀಕರ್ಗೆ ರೇವಣ್ಣ ಹೇಳಿದರು. ಈಶ್ವರಪ್ಪ ವಿಶಾಲ ಹೃದಯದವರು. ನಮ್ಮ ಜಿಲ್ಲೆಗೆ ಕುಡಿಯುವ ನೀರಿಗೆ ಅನುದಾನ ನೀಡುತ್ತಾರೆ ಎಂದರು. ಆಗ ಈಶ್ವರಪ್ಪ, ನೀವು ಎಷ್ಟು ವಿಶಾಲ ಹೃದಯ ತೋರಿದ್ದೀರಿ ಎಂಬುದು ಗೊತ್ತಿದೆ. ಎಂಟಾಣೆ ಕೂಡ ಕೊಡಲಿಲ್ಲ ಎಂದು ತಿವಿದರು.