ಜಿಲ್ಲೆ

ಪ್ರತ್ಯೇಕ ಚಿಮುಲ್‌ಗೆ ಕ್ಷೇತ್ರ ರಚನೆ ಕಸರತ್ತು

ಎನ್.ವೆಂಕಟೇಶ್

ವಿಂಗಡಣೆ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಅಸ್ತಿತ್ವಕ್ಕಾಗಿ ಪ್ರಮುಖ ಪಕ್ಷಗಳಿಂದ ಚುನಾವಣೆಗೆ ಸಜ್ಜು

ಚಿಕ್ಕಬಳ್ಳಾಪುರ: ಪ್ರತ್ಯೇಕ ಹಾಲು ಒಕ್ಕೂಟ ರಚನೆ ಬಳಿಕ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರದ ಚರ್ಚೆ ಜೋರಾಗಿದೆ.

ಹೌದು! ಚಿಮುಲ್ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಒಕ್ಕೂಟಕ್ಕೆ ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಆಸ್ತಿ ವಿಭಜನೆ, ಸಂಪನ್ಮೂಲ ಕ್ರೋಡೀಕರಣ, ಆಡಳಿತ ಮಂಡಳಿ ರಚನೆ ಸೇರಿ ವಿವಿಧ ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ನಡುವೆ ಹೊಸ ಒಕ್ಕೂಟದಲ್ಲಿ ಹೈನೋದ್ಯಮದ ಅಭಿವೃದ್ಧಿ ಜತೆಗೆ ರಾಜಕೀಯ ಲಾಭ ಲೆಕ್ಕಾಚಾರದಲ್ಲಿ ಕ್ಷೇತ್ರ ವಿಂಗಡಣೆಯು ಚರ್ಚೆಗೆ ಗ್ರಾಸವಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್, ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಕ್ಕೂಟದಲ್ಲಿ ಅಸ್ತಿತ್ವ ಹೊಂದುವ ನಿಟ್ಟಿನಲ್ಲಿ ಚುನಾವಣೆಗೆ ಸಜ್ಜಾಗುತ್ತಿವೆ. ಇದೇ ವೇಳೆ ಸದ್ದಿಲ್ಲದೆ ನಾನಾ ತಂತ್ರಗಾರಿಕೆಗಳೂ ಶುರುವಾಗಿವೆ. ಹಾಗೆಯೇ ಮಾಹಿತಿ ಕಲೆ ಹಾಕಿ, ಉನ್ನತ ಮಟ್ಟದಲ್ಲಿ ವಿರೋಧಿಸುವ ಕೆಲಸಗಳು ಆಗುತ್ತಿವೆ.

ಜಿಲ್ಲೆಯಲ್ಲಿ ಕ್ಷೇತ್ರ ವಿಂಗಡಣೆ: ಒಕ್ಕೂಟದ ಆಡಳಿತ ಮಂಡಳಿಗೆ ಸಹಕಾರಿ ಇಲಾಖೆ ನಿಯಮದಡಿ 18 ನಿರ್ದೇಶಕರು ಇರಲಿದ್ದು, ಈ ಪೈಕಿ 13 ಸ್ಥಾನಗಳು ಚುನಾವಣೆಯಲ್ಲಿ ಆಯ್ಕೆ, ಸರ್ಕಾರದ ನಾಮ ನಿರ್ದೇಶನ, ಎನ್‌ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆ ಪ್ರತಿನಿಧಿಗಳು ನಿರ್ದೇಶಕರಾಗಿ ಇರಲಿದ್ದಾರೆ. ಜಿಲ್ಲೆಯಲ್ಲಿ ತಾಲೂಕುಗಳ ಸಂಖ್ಯೆ ಈಗ 6ರಿಂದ 8ಕ್ಕೆ ಏರಿಕೆಯಾಗಿದೆ. ಹೊಸದಾಗಿ ರಚನೆಯಾಗಿರುವ ಮಂಚೇನಹಳ್ಳಿ ಮತ್ತು ಚೇಳೂರು ತಾಲೂಕಿಗೆ ಎಷ್ಟು ನಿರ್ದೇಶಕ ಸ್ಥಾನ ಮೀಸಲಿಡಲಾಗುತ್ತಿದೆ ಎನ್ನುವುದೂ ಚರ್ಚೆಗೆ ಗ್ರಾಸವಾಗಿದೆ. ಹಿಂದೆ ಜಿಲ್ಲೆಯಲ್ಲಿ 6 ತಾಲೂಕುಗಳಿಂದ 6 ನಿರ್ದೇಶಕರು ಮತ್ತು 1 ಮಹಿಳಾ ನಿರ್ದೇಶಕಿ ಸೇರಿ 7 ಸ್ಥಾನಗಳಿದ್ದವು.

978 ಡೇರಿ, 890 ಮತದಾರರು

ಪ್ರಸ್ತುತ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ 199, ಬಾಗೇಪಲ್ಲಿ 101, ಗುಡಿಬಂಡೆ 60, ಶಿಡ್ಲಘಟ್ಟ 217, ಚಿಂತಾಮಣಿ 235, ಗೌರಿಬಿದನೂರು 166 ಸೇರಿ 978 ಡೇರಿಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಮಹಿಳಾ ಮೀಸಲು ಕ್ಷೇತ್ರದಿಂದ 111, ಚಿಕ್ಕಬಳ್ಳಾಪುರ 136, ಚಿಂತಾಮಣಿ 150, ಗೌರಿಬಿದನೂರು 117, ಗುಡಿಬಂಡೆಯಲ್ಲಿ 114, ಶಿಡ್ಲಘಟ್ಟದಲ್ಲಿ 149, ಬಾಗೇಪಲ್ಲಿಯಲ್ಲಿ 113 ಸೇರಿ 890 ಮತದಾರರಿದ್ದಾರೆ.

ದುಂದು ವೆಚ್ಚ, ನಿರ್ವಹಣೆ ಹೊರೆ

ಪ್ರಸ್ತುತ ಚಿಮುಲ್ ಒಕ್ಕೂಟದಲ್ಲಿ ಪ್ರತಿನಿತ್ಯ ಸರಾಸರಿ 2.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೆಚ್ಚಿನ ನಿರ್ದೇಶಕರ ಆಯ್ಕೆ ದುಂದುವೆಚ್ಚ, ನಿರ್ವಹಣೆ ಹೊರೆ ಹೆಚ್ಚಳಕ್ಕೆ ಕಾರಣವಾಗಿದೆ. ಇದಕ್ಕೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಸರ್ವಾನುಮತದಿಂದ ಕ್ಷೇತ್ರ ಮರುವಿಂಗಡಣೆ ತೀರ್ಮಾನ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಹೊಸದಾಗಿ ರಚನೆಯಾಗಿರುವ ಮಂಚೇನಹಳ್ಳಿ ಮತ್ತು ಚೇಳೂರು ತಾಲೂಕಿನ ವ್ಯಾಪ್ತಿಯಲ್ಲಿ ಇಬ್ಬರು ನಿರ್ದೇಶಕರ ಆಯ್ಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಹಾಲು ಒಕ್ಕೂಟವೂ ಜಿಲ್ಲೆಯ 8 ತಾಲೂಕುಗಳಿಗೆ ತಲಾ ಒಬ್ಬರು ನಿರ್ದೇಶಕರು, ಮಹಿಳಾ ಸ್ಥಾನವನ್ನು 4 ತಾಲೂಕಿಗೆ ಒಬ್ಬರಂತೆ 2 ಸ್ಥಾನಗಳನ್ನು ವಿಂಗಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಕೋಲಾರದಲ್ಲಿ ವಿವಾದ

ಈಗಾಗಲೇ ಕೋಲಾರ ಹಾಲು ಒಕ್ಕೂಟದಲ್ಲಿ ನಿಯಮಬಾಹಿರವಾಗಿ ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂಬ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕಟಗೊಂಡ ಪಟ್ಟಿ ಈಗ ರದ್ದಾಗಿದೆ. ಈಗ ಮತ್ತೊಮ್ಮೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲೂ ಇಂತಹ ವಿವಾದ ಅನುಮಾನದ ಅಲೆ ಎಬ್ಬಿಸಿದೆ. ಇದಕ್ಕೆ ಕೆಎಂಎಫ್ ಮಾಜಿ ಅಧ್ಯಕ್ಷರು, ಜಿಲ್ಲಾ ಒಕ್ಕೂಟದ ಮಾಜಿ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಸ್ವಪಕ್ಷೀಯ ನಾಯಕರ ಸಭೆಯಲ್ಲಿ ಪರಸ್ಪರ ಚರ್ಚಿಸಿ, ಅನುಕೂಲಕರ ನಿಲುವುಗಳ ಬಗ್ಗೆ ನಿರ್ಧರಿಸುತ್ತಿದ್ದಾರೆ.

"ಸಹಕಾರಿ ಕಾಯ್ದೆ ಅನ್ವಯ ಜಿಲ್ಲೆಯಲ್ಲಿ ತಾಲೂಕಿಗೆ ಒಬ್ಬರಂತೆ 8 ನಿರ್ದೇಶಕರನ್ನು, 4 ತಾಲೂಕಿಗೆ ಒಬ್ಬರಂತೆ ಎರಡು ಮಹಿಳಾ ಸ್ಥಾನವನ್ನು ವಿಂಗಡಿಸಬೇಕು. ಹೆಚ್ಚುವರಿ ಕ್ಷೇತ್ರ ಮಾಡಿದ್ದಲ್ಲಿ ಆರ್ಥಿಕ ನಷ್ಟ ಮತ್ತು ದುಂದುವೆಚ್ಚ ಹೊರೆ ಬೀಳಲಿದೆ." - ಎಂ.ಎನ್.ಕೃಷ್ಣಮೂರ್ತಿ ಮರಳುಕುಂಟೆ ಡೇರಿ ಅಧ್ಯಕ್ಷ, ಚಿಕ್ಕಬಳ್ಳಾಪುರ