ಸಾಂದರ್ಭಿಕ ಚಿತ್ರ 
ಜಿಲ್ಲೆ

ಕೂಳೂರು ಪ್ರತ್ಯೇಕ ಅಪಘಾತ ಓರ್ವ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಬಳಿಯ ನಿವಾಸಿ ಸದಾನಂದ ಶೆಟ್ಟಿಗಾರ್ (46) ಮೃತಪಟ್ಟವರು. ಕೊಟ್ಟಾರಚೌಕಿ ಕಡೆಯಿಂದ ಸುರತ್ಕಲ್ ಕಡೆಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಯಲ್ಲಿದ್ದ ಹೆಲ್ಮೆಟ್ ರಸ್ತೆಗೆ ಎಸೆಯಲ್ಪಟ್ಟು ತಲೆ ಇಬ್ಬಾಗವಾಗಿ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಅಜರುದ್ದೀನ್ ಘಟನೆ ನಡೆದ ಬಳಿಕ ಲಾರಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದಾನಂದ ಅವರು ನಿರ್ಮಾಣ ಮಾಡಿದ ಹೊಸ ಮನೆಯ ಗೃಹಪ್ರವೇಶ ಇತ್ತೀಚೆಗೆ ನಡೆದಿತ್ತು ಎಂದು ತಿಳಿದು ಬಂದಿದೆ. ಅಪಘಾತ ನಡೆದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಹಾಗೂ ಉತ್ತರ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ರಸ್ತೆಯಲ್ಲಿ ಬಿದ್ದಿದ್ದ ಸದಾನಂದ ಅವರ ಮೃತದೇಹವನ್ನು ಪೊಲೀಸರು ಬದಿಗೆ ಸರಿಸಿ ಬಳಿಕ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಇನ್ನೊಂದು ಪ್ರಕರಣದಲ್ಲಿ ಬೆಳಗ್ಗಿನ ಜಾವ 4.30 ಗಂಟೆಗೆ ಶ್ರೀನಿವಾಸ (35) ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಹೆದ್ದಾರಿ ಬದಿ ವಿನೋದ್ ಕುಮಾರ್ ಪೌಲ್ ಎಂಬಾತ ಪಾರ್ಕಿಂಗ್ ಮಾಡಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶ್ರೀನಿವಾಸ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ತಲೆಯ ಭಾಗದಲ್ಲಿ ರಕ್ತಗಾಯ ಮತ್ತು ಎಡ ಭುಜದ ಮೂಳೆ ಮುರಿತ,ಹೊಟ್ಟೆಯಯ ಭಾಗದಲ್ಲಿ ಗುದ್ದಿದ ಗಾಯವಾಗಿದೆ. ಸ್ಕೂಟರ್ ಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.