ಮಸ್ಕಿ: ಕಾಲ್ಪನಿಕ ಕತೆಗಿಂತ ಸಾಮಾಜಿಕ ವ್ಯವಸ್ಥೆಗೆ ಮುಖಾಮುಖಿಯಾಗಿ ಸಾಹಿತ್ಯ ರಚನೆಯಾಗಲಿ ಎಂದು ಹಿರಿಯ ಸಾಹಿತಿ ಮಂಡಲಗಿರಿ ಪ್ರಸನ್ನ ಹೇಳಿದರು.
ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಶಿಕ್ಷಕ ಆದಪ್ಪ ಹೆಂಬಾ ಅವರ ‘ಅದ್ವಿತಾ ಕಾದಂಬರಿ’ ಬಿಡುಗಡೆಗೊಳಿಸಿ ಮಾತನಾಡಿದರು. ಲೇಖಕರು ಸಂವೇದನ ಶೀಲರಾಗಿರಬೇಕು. ಸಮಾಜದಲ್ಲಿ ನಡೆಯುವ ಘಟನೆಗಳನ್ನು ಆಧಾರಿಸಿ ಸಾಹಿತ್ಯ ರಚನೆಯಾದಾಗ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದರು.
ನಿವೃತ್ತ ಉಪನಿರ್ದೇಶಕ ಮಲಿಕಾರ್ಜುನ ಸ್ವಾಮಿ ಹಿರೇಮಠ ಮಾತನಾಡಿ, ಅದ್ವಿತಾ ಕಾದಂಬರಿ ಸ್ಥಳೀಯ ಆಡು ಭಾಷೆಯಲ್ಲಿ ಮೂಡಿ ಬಂದಿರುವುದರಿಂದ ಪಾತ್ರಗಳೊಂದಿಗೆ ಓದುಗ ಮಾತನಾಡಿದಂತೆ ಭಾಸವಾಗುತ್ತದೆ. ರಾಯಚೂರು ಭಾಷೆಯ ಸೊಗಡನ್ನು ಕಾದಂಬರಿಕಾರ ಆದಪ್ಪ ಹೆಂಬಾ ಚನ್ನಾಗಿ ಬಳಸಿಕೊಂಡು ಉತ್ತಮ ಕಾದಂಬರಿಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಾಹಿತಿ ಮಹಾಂತೇಶ ಮಸ್ಕಿ ಮಾತನಾಡಿ, ಕಾದಂಬರಿ ರಚನೆಗೆ ಧ್ಯಾನಸ್ಥ ಮನಸ್ಸು ಮತ್ತು ಕ್ಷೇತ್ರ ಕಾರ್ಯ ಬಹಳ ಮುಖ್ಯವಾಗಿದೆ. ಇಡೀ ಕಾದಂಬರಿಯಲ್ಲಿ ಟೆನ್ನಿಸ್ ಆಟದ ಬಗ್ಗೆ ಕಟ್ಟಿಕೊಡಲಾಗಿದೆ. ಕಾದಂಬರಿಕಾರ ಆದಪ್ಪ ಹೆಂಬಾ ಟಿನ್ನಿಸ್ ಆಟಗಾರ ಅಲ್ಲದಿದ್ದರೂ ಟೆನ್ನಿಸ್ ಗುರುಗಳಾದ ಅರವಿಂದ ಶಾಸಲ್ ಅವರಿಂದ ಮಾಹಿತಿ ಪಡೆದುಕೊಂಡು ಅರವಿಂದ ಶ್ಯಾಸಲ್ ಅವರನ್ನು ಪಾತ್ರದಲ್ಲಿ ತಂದು ಉತ್ತಮವಾದ ಕ್ಷೇತ್ರಕಾರ್ಯ ಮಾಡಿ ಕಾದಂಬರಿ ರಚಿಸಿದ್ದು ಈ ಕೃತಿಯ ಹೆಗ್ಗ್ಗಳಿಕೆಯಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಉದ್ಘಾಟಿಸಿದರು.