ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳ ನಿರ್ವಹಣೆ ವಿಚಾರದಲ್ಲಿ ವಿವಿ ನಿರ್ಲಕ್ಷೃ ತೋರುತ್ತಿದೆ. ಈಜುಕೊಳವನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಸರಿಯಾಗಿ ನಿರ್ವಹಣೆ ಮಾಡದೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ನಗರದ ಹಿರಿಯ ಈಜುಪಟುಗಳು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಈಜುಕೊಳದ ಮುಂಭಾಗ ಸೇರಿದ ಹಿರಿಯ ಈಜುಪಟುಗಳು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಜುಕೊಳವನ್ನು ಖಾಸಗಿಗೆ ನೀಡಬೇಕು ಎಂಬ ಉದ್ದೇಶದಿಂದ ನಿರ್ವಹಣೆಯಲ್ಲಿ ನಿರ್ಲಕ್ಷೃ ತೋರಲಾಗುತ್ತಿದೆ. ನಿರ್ವಹಣೆಗೆ ಬೇಕಾದ ರಾಸಾಯನಿಕ ಖಾಲಿಯಾಗಿ ಹಲವು ದಿನಗಳಾದರೂ ಪೂರೈಸಿಲ್ಲ. ಕಾರಣ ಈಜುಕೊಳವನ್ನು ಶುಚಿಗೊಳಿಸದೆ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಮೂರು ದಿನಗಳಿಂದ ಈಜುಕೊಳದ ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಈಜುಕೊಳದಲ್ಲಿ ನಿತ್ಯ ನೂರಾರು ಸಾರ್ವಜನಿಕರು ಹಾಗೂ ಯುವ ಈಜುಪಟುಗಳು ಅಭ್ಯಾಸ ನಡೆಸುತ್ತಿದ್ದಾರೆ. ಈಗ ಬಂದ್ ಮಾಡಿರುವುದರಿಂದ ತೊಂದರೆಯಾಗಿದ್ದು ಆದಾಯಕ್ಕೂ ಕತ್ತರಿ ಬಿದ್ದಿದೆ.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾವಿಯೊಬ್ಬರು ತಮ್ಮ ಸಂಬಂಧಿಕರಿಗೆ ಈಜುಕೊಳವನ್ನು ಗುತ್ತಿಗೆ ಕೊಡಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಹಾಗಾಗಿ, ಈಜುಕೊಳದ ನಿರ್ವಹಣೆಗೆ ಅಗತ್ಯವಾದ ರಾಸಾಯನಿಕ ತರಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಶೀಘ್ರ ಈಜುಕೊಳವನ್ನು ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಈಜುಪಟುಗಳಾದ ಲಕ್ಷ್ಮೀ ವೆಂಕಟೇಶ್, ನಾಗೇಶ್, ಜನಾರ್ದನ್, ಸೋಮಶೇಖರ್, ಸುನೀಲ್, ರಘು, ಮೋಹನ್, ರಾಮಚಂದ್ರೇಗೌಡ, ಶಿವಶಂಕರ್, ನಾಗರಾಜ್ ಇತರರಿದ್ದರು.