ಜಿಲ್ಲೆ

'ಕೇಶವ' ಪ್ರಶಸ್ತಿಗೆ ಡಾ. ರಮಾನಂದ ಬನಾರಿ ಆಯ್ಕೆ

ಅ.18ರಂದು ಉಡುಪಿಯಲ್ಲಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನ ಕ್ಷೇತ್ರದ ಸಾಹಿತ್ಯ, ಸಂಶೋಧನೆ ಮೂಲಕ ಕನ್ನಡದ ವಿದ್ವಾಂಸರ ಪರಂಪರೆ ಶ್ರೀಮಂತಗೊಳಿಸಿದ ಕವಿಕನೀಯ ಖ್ಯಾತಿಯ ದ.ಕ. ಜಿಲ್ಲೆ ಪುತ್ತೂರಿನ ಪ್ರೊ. ತಾಳ್ತಜೆ ಕೇಶವ ಭಟ್​ ಸ್ಮರಣಾರ್ಥ ನೀಡುವ 2025ನೇ ಸಾಲಿನ ಕೇಶವ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಆಯ್ಕೆಯಾಗಿದ್ದಾರೆ.

ಡಾ. ರಮಾನಂದ ಬನಾರಿ ಅವರು ಖ್ಯಾತ ಪ್ರಸಂಗಕರ್ತ ಕೀರಿಕ್ಕಾಡು ವಿಷ್ಣು ಭಟ್ಟ ಹಾಗೂ ಜಾನಪದ ಹಾಡುಗಾರ್ತಿ ಪರಮೇಶ್ವರಿ ಅಮ್ಮನವರ ಪುತ್ರರಾಗಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದು, ಪ್ರವೃತ್ತಿಯಿಂದ ಬರಹಗಾರರು ಮತ್ತು ತಾಳಮದ್ದಳೆ ಅರ್ಥಧಾರಿಗಳು. ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದಿಂದ ಎಂಬಿಬಿಎಸ್​ ಪದವಿ ಗಳಿಸಿದ್ದಾರೆ. ವೃತ್ತಿಯೊಂದಿಗೆ ಸುಮಾರು 20ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. 10ಕ್ಕೂ ಹೆಚ್ಚು ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ.

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅ.18ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.