ಜಿಲ್ಲೆ

ಕುವೆಂಪುಗೆ ‘ಭಾರತ ರತ್ನ’ಕ್ಕೆ ರಾಜ್ಯ ಶಿಫಾರಸು ಮಾಡಲಿ: ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಆಗ್ರಹ

ಮೈಸೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ‘ಭಾರತ ರತ್ನ’ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ತಿಳಿಸಿದರು.

ಮುಖ್ಯಮಂತ್ರಿಗಳು ಆ.31ರಂದು ನಗರಕ್ಕೆ ಆಗಮಿಸಲಿದ್ದು, ಅಂದು ಕುವೆಂಪು ವಿಶ್ವ ಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಮನವಿ ಸಲ್ಲಿಸಿ ಪ್ರಧಾನಿಗೆ ಮನವಿ ಪತ್ರ ಕಳುಹಿಸುವಂತೆ ಕೋರಲಾಗುವುದು. ಕನ್ನಡ ಸಾಹಿತ್ಯ, ಸಂಸ್ಕೃತಿಯ ಶಕ ಪುರುಷರೂ ಆಗಿರುವ ರಾಷ್ಟ್ರಕವಿ ಕುವೆಂಪು ಅವರು ಯುಗದ ಕವಿ, ಜಗದ ಕವಿ ಎಂದೇ ಬಣ್ಣಿತರಾದವರು. ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಇವರನ್ನು ವಿಶ್ವ ಮಾನವ ಸಂದೇಶದ ಕಾರಣರಿಂದಾಗಿ ವಿಶ್ವರತ್ನರೆಂದರೂ ತಪ್ಪೇನಿಲ್ಲ ಎಂದರು.

ಕುವೆಂಪು ಬದುಕಿದ್ದಾಗಲೇ ಭಾರತ ರತ್ನ ನೀಡಿದ್ದರೆ ವಿಶೇಷವಾದ ಅರ್ಥ ಇರುತ್ತಿತ್ತು. ದುರದೃಷ್ಟವಶಾತ್ ಸಿಗಲಿಲ್ಲ. ಅವರ ಕೃತಿಗಳೇನಾದರೂ ಆಗಲೇ ಇಂಗ್ಲಿಷ್‌ಗೆ ಅನುವಾದಗೊಂಡಿದ್ದಲ್ಲಿ ಖಂಡಿತ ನೊಬೆಲ್ ಪ್ರಶಸ್ತಿ ದೊರಕುತ್ತಿತ್ತು. ಆದ ಕಾರಣ ಈಗಲಾದರೂ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡಬೇಕು ಎಂದು ಕೋರಿದರು.

ಸಾಹಿತಿ ಪ್ರೊ.ಸಿ.ನಾಗಣ್ಣ ಮಾತನಾಡಿ, ನಾವೀಗ ಸಕಾರಾತ್ಮಕ ಯೋಚನೆ ಕಾಲಘಟ್ಟದಲ್ಲಿದ್ದೇವೆ. ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬುದು ಕನ್ನಡಿಗರ ಮನಸ್ಸಿನಲ್ಲಿ ಮೂಡಿದೆ. ಇದರಿಂದ ಕನ್ನಡ ಭಾಷೆ ಬೆಳವಣಿಗೆ ಆಗುತ್ತದೆ. ಕನ್ನಡಿಗರ ದೃಷ್ಟಿಯಿಂದ ಹೊಸ ಸಂಚಲನ ಉಂಟಾಗುತ್ತದೆ. ಅಲ್ಲದೆ ರಾಜ್ಯದ ಅಭಿವೃದ್ಧಿಗೂ ನಾಂದಿ ದೊರೆಯುತ್ತದೆ ಎಂದರು.

ಟ್ರಸ್ಟ್ ಅಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ಈ ಮನವಿ ಪತ್ರ ಸಲ್ಲಿಕೆಯನ್ನು ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‌ಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ಮೊದಲಾದವರು ಬೆಂಬಲಿಸಿದ್ದು, ಸಿಎಂಗೆ ಮನವಿ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಸಂಸದ ಯದುವೀರ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ನಿವೃತ್ತ ಅಧಿಕಾರಿ ಜಯಣ್ಣ ಇದ್ದರು.