ಜಿಲ್ಲೆ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಾತಿ ರಾಜಕಾರಣಕ್ಕೆ ಬೇಸತ್ತು ಹಿರಿಯ ಮುಖಂಡ ಬಿಜೆಪಿಗೆ ರಾಜಿನಾಮೆ ?

Mangaluru - Nishantha Narayana

ಪುತ್ತೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಜಾತಿ ರಾಜಕಾರಣ ನಡೆಸಿ ಪಕ್ಷದ ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಗೆ ಹಿರಿಯ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಪಡ್ನೂರು ಬೂತ್ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪೆರ್ವೋಡಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಲಭಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಆ ಬೂತ್ ನ ಪ್ರಮುಖರ ಅಭಿಪ್ರಾಯ ಪಡೆಯದೆ ನಾಯಕರು ಕಡೆಗಣಿಸಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

ಬಿಲ್ಲವ ಮನೆತನವಾದ ನಮ್ಮ ಪೆರ್ವೋಡಿ ಮನೆ ಜನಾರ್ದನ ಪೂಜಾರಿ, ವಿನಯಕುಮಾರ್ ಕುಮಾರ್ ಸೊರಕೆ ಸಮಯದಲ್ಲಿಯೇ ಬಿಜೆಪಿಗಾಗಿ ದುಡಿದ ಮನೆತನವಾಗಿದೆ. ನನ್ನ ಮೂವರು ಸಹೋದರರು ಪಕ್ಷ ಹಾಗೂ ಸಂಘಟನೆಯ ಕೆಲಸ ಮಾಡುತ್ತಿರುವಾಗಲೇ ತಮ್ಮ ಪ್ರಾಣರ್ಪಾಣೆ ಮಾಡಿದ್ದಾರೆ. ಈಗಿನ ನಾಯಕರ ನಡೆಯಿಂದ ತುಂಬಾ ಬೇಸರವಾಗಿದೆ.

ಕಾರ್ಯಕರ್ತರ ಧ್ವನಿಯಾಗಿರಬೇಕೆ ವಿನಃ ಜಾತಿ ನೋಡಿಯೇ ಎಲ್ಲದರಲ್ಲೂ ಅಧಿಕಾರ ಕೊಡಬಾರದು , ಎಲ್ಲಾ ಜಾತಿಯವರು ಪಕ್ಷಕ್ಕಾಗಿ ದುಡಿದಿದ್ದಾರೆ. ನಮ್ಮ ಬೂತ್ ನಲ್ಲಿ ಬಿಜೆಪಿ ಸೋತಿತ್ತು. ೬ ಸ್ಥಾನ ಗೆಲ್ಲಿಸಿದ್ದೇವೆ ಆದರೂ ಜಾತಿ ನೋಡಿ ಅಧಿಕಾರ ಕೊಡುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.

ಉಪಾಧ್ಯಕ್ಷ ಸ್ಥಾನ ಜಾತಿ ನೋಡಿ ಕೊಟ್ಟಾಗಲೇ ನಾನು ಪಕ್ಷದ ಮಂಡಲ ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ್ದೇನೆ, ೧೫ ದಿನದಲ್ಲಿ ಗ್ರಾಮ ಪಂಚಾಯತ್ ಸದಸ್ಯತನದ ರಾಜೀನಾಮೆಯೂ ಅಂಗಿಕಾರವಾಗ್ತದೆ ನಂತರ ರಾಜಕೀಯದಿಂದ ದೂರವಿರುತ್ತೇನೆ ಎಂದು ಶ್ರೀನಿವಾಸ್ ಪೆರ್ಲೋಡಿ ತಿಳಿಸಿದ್ದಾರೆ.