ಜಿಲ್ಲೆ

ಹಿರಿಯ ಭಾಷಾ ವಿಜ್ಞಾನಿ ಡಾ.ಯು.ಪಿ ಉಪಾಧ್ಯಾಯ ನಿಧನ

ಉಡುಪಿ: ಹಿರಿಯ ಭಾಷಾ ವಿಜ್ಞಾನಿ, ತುಳು ವಿದ್ವಾಂಸ ಡಾ. ಯು. ಪಿ ಉಪಾಧ್ಯಾಯ (85) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು.

ಕಾಪು, ಉಳಿಯಾರು ಗ್ರಾಮದ ಡಾ.ಉಪಾಧ್ಯಾಯ ಜಾನಪದ, ಸಂಸ್ಕೃತಿ, ಭಾಷೆಯ ವಿಚಾರಗಳಲ್ಲಿ ಅತ್ಯಮೂಲ್ಯ ಅಧ್ಯಯನ ಮಾಡಿ ಬಹಳಷ್ಟು ಸಾಧನೆ ಮಾಡಿದ್ದರು. ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಯೋಜನೆಗೆ ಸಂಬಂಧಿಸಿ ಆರು ಸಂಪುಟಗಳ ( 3,440 ಪುಟ, ಒಂದು ಲಕ್ಷ ಶಬ್ಧ) ತುಳು ನಿಘಂಟು ಬಿಡುಗಡೆ ಮಾಡಲಾಗಿತ್ತು. ಕರಾವಳಿಯಲ್ಲಿ ಕನ್ನಡ ಶಾಸನಗಳ ಅಧ್ಯಯನ ಬಗ್ಗೆಯೂ ಸಂಶೋಧನೆ ಕೈಗೊಂಡಿದ್ದರು .

ಭಾಷಾ‌ ಅಧ್ಯಯನದಲ್ಲಿ ಕುರಿತಾಗಿ ವಿಶೇಷ ಆಸಕ್ತರಾಗಿದ್ದ ಅವರು ಆಫ್ರಿಕಾ ಖಂಡದ ದೇಶಗಳಿಗೆ ತೆರಳಿ ಜಾನಪದ ಭಾಷೆಗಳ ಕುರಿತು ಸಂಶೋಧನೆ ಕೈಗೊಂಡು ದಾಖಲಿಕರಣ ಮಾಡಿದ್ದರು. ಪತ್ನಿ ದಿ. ಡಾ. ಸುಶೀಲಾ ಉಪಾಧ್ಯಾಯ ಅವರೊಂದಿಗೆ ಸೇರಿಕೊಂಡು ಬಹಳಷ್ಟು ಮಹತ್ವದ ಸಂಶೋಧನೆ ಕಾರ್ಯಗಳನ್ನು ನಡೆಸಿದ್ದರು.