ವಿಜಯಪುರ ನಗರದ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು.  
ಜಿಲ್ಲೆ

ಅಂಜುಮನ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ, ರಾಷ್ಟ್ರ ನಿರ್ಮಾಣದಲ್ಲಿ ಗುರುವಿನ ಪಾತ್ರ ಪ್ರಮುಖ ಎಂದ ಹಿರಿಯ ಪತ್ರಕರ್ತ ರಫಿ ಭಂಡಾರಿ

ವಿಜಯಪುರ: ದೇಶದ ಭವಿಷ್ಯ ರೂಪಿಸುವ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಿ ಸುಂದರ ಮತ್ತು ಸದೃಢ ರಾಷ್ಟ್ರ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಪತ್ರಕರ್ತ ರಫಿ ಭಂಡಾರಿ ಹೇಳಿದರು.

ನಗರದ ಪ್ರತಿಷ್ಠಿತ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರು ಸತ್ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳು. ಭವಿಷ್ಯದ ಪ್ರಜೆಗಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವ ರಾಷ್ಟ್ರ ನಿರ್ಮಾತೃಗಳು. ಶಿಕ್ಷಕರಿಗೆ ಇರುವಷ್ಟು ಗೌರವ ಬೇರೆ ಯಾವುದೇ ವೃತ್ತಿಯವರಿಗೆ ಇಲ್ಲವೆಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರುವಿನ ಸ್ಥಾನ ಇಲ್ಲದಿದ್ದರೆ ಆತನ ಪ್ರಪಂಚ ಅಪೂರ್ಣವಾದುದು. ಗುರುವಿಗೆ ಗೌರವ ಕೊಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಚೇರಮನ್ ಅಲ್-ಹಜ್ ಜನಾಬ ಸಜ್ಜಾದೆಪೀರಾಂ ಮುಷರಿಫ್ ಮಾತನಾಡಿ, ಶಿಲೆಯನ್ನು ಕೆತ್ತಿ ಸುಂದರ ಆಕರ್ಷಕ ಮೂರ್ತಿ ಮಾಡುವ ಶಕ್ತಿ ಶಿಲ್ಪಿಗೆ ಇರುವಂತೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪುಗೊಳಿಸಿ ಸುಂದರ ಸಮಾಜ ನಿರ್ಮಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.

ಪ್ರಾಚಾರ್ಯೆ ಡಾ. ಶಾರದಾಮಣಿ ಹುಣಶಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಡಿ.ಎಚ್. ನದಾಫ್, ಡಾ. ಎಸ್.ಎಸ್. ಗುಡದುರ, ಡಾ.ಎನ್.ಎಂ. ಪಠಾಣ, ಡಾ.ಎ.ಎಂ. ಜಂಬಗಿ, ಎಫ್.ಆರ್. ಸಾರವಾಡ, ಎಂ.ಎಂ. ಮುಲ್ಲಾ, ಎಂ.ಎಂ. ಮುಷರಿಫ್, ಎಸ್.ಎ. ಹಳ್ಳಿ, ಎಫ್.ಎ. ಕಾಜಿ, ಎಸ್.ಎಚ್. ಇನಾಮದಾರ ಮತ್ತಿತರರಿದ್ದರು.

ಪ್ರಾಧ್ಯಾಪಕ ಬಿ.ಎಚ್. ಅವಟಿ ಸ್ವಾಗತಿಸಿ ಪರಿಚಯಿಸಿದರು. ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ.ಎಸ್.ಎಚ್. ಮಿರ್ಜಿ ವಂದಿಸಿದರು. ಭಾರತೀಯ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು.