ಜಿಲ್ಲೆ

ಕಾಂಗ್ರೆಸ್​ ಆಡಳಿತದಲ್ಲಿ ಶೇ.40ಕ್ಕೂ ಹೆಚ್ಚಿನ ಕಮಿಷನ್ ಬೇಡಿಕೆ ಇದೆ​: ಹಿರಿಯ ಕೈ ನಾಯಕನಿಂದ ಗಂಭೀರ ಆರೋಪ

ತುಮಕೂರು: ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ವಿರುದ್ಧ 40% ಕಮಿಷನ್​ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್​ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕುವುದಾಗಿ ಜನರಿಗೆ ಮಾತು ಕೊಟ್ಟಿತ್ತು. ಇದೀಗ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧವೇ ಶೇ.40 ರಷ್ಟು ಕಮಿಷನ್​ ಆರೋಪ ಕೇಳಿ ಬಂದಿದ್ದು, ಸಾಲು ಸಾಲು ಹಗರಣಗಳ ನಡುವೆ ಇದು ಮಗ್ಗಲ ಮುಳ್ಳಾಗಿ ಪರಿಣಮಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗುತ್ತಿಗೆದಾರರು ಶೇ.40ಕ್ಕೂ ಹೆಚ್ಚು ಕಮಿಷನ್‌ ನೀಡಿ ಬಿಲ್‌ ಮಂಜೂರು ಮಾಡಿಕೊಳ್ಳಬೇಕಾಗಿದೆ ಎಂದು ತುಮಕೂರು ಜಿಲ್ಲಾ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಹಿರಿಯ ಕಾಂಗ್ರೆಸ್‌ ಮುಖಂಡ ಎ.ಡಿ.ಬಲರಾಮಯ್ಯ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಬಲರಾಮಯ್ಯ, ಸ್ಥಳೀಯ ಗುತ್ತಿಗೆದಾರರು ನೀಡಿದ ದೂರಿನ ಮೇರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಕೆಲವು ಎಂಜಿನಿಯರ್‌ಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಜಲ ಜೀವನ್ ಮಿಷನ್ ಅಡಿಯಲ್ಲಿ ಮಾಡಿದ ಕಾಮಗಾರಿಗಳಿಗೆ ಬಿಲ್‌ಗಳನ್ನು ಕ್ಲಿಯರ್ ಮಾಡಲು ಭಾರಿ ಮೊತ್ತದ ಲಂಚ ಕೇಳಿದ್ದರು. ಕಮಿಷನ್ ನೀಡದಿದ್ದರೆ ಗುತ್ತಿಗೆದಾರರ ಬಿಲ್‌ಗಳನ್ನು ಕ್ಲಿಯರ್ ಮಾಡದಂತೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಆರೋಪಿಸಿದ್ದಾರೆ.

ಕಮಿಷನ್ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳದಿದ್ದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿ ಹೋರಾಟ ನಡೆಸುತ್ತೇವೆ. ಬಿಜೆಪಿ ಆಡಳಿತದಲ್ಲಿ ಶೇ.40ರಷ್ಟು ಕಮಿಷನ್ ನೀಡಲಾಗಿತ್ತು. ಈಗ ಶೇ.40ಕ್ಕಿಂತ ಹೆಚ್ಚಿದೆ. ಧಾನಸಭೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಭ್ರಷ್ಟಾಚಾರ ಕಡಿಮೆಯಾಗುವ ಬದಲು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

ಹಿಂದೆ ಹಿರಿತನದ ಆಧಾರದ ಮೇಲೆ ಎಲ್ಒಸಿ ನೀಡಲಾಗಿತ್ತು. ಆದರೆ ಈಗ ಕಮಿಷನ್ ಕೊಡುವವರಿಗೆ ಮಾತ್ರ ಬಿಲ್ ಕ್ಲಿಯರ್ ಮಾಡುವಂತೆ ಸಚಿವರು, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿನ ಮಾಡಲಾದ ಕಾಮಗಾರಿಗಳ ಬಿಲ್‌ ಕ್ಲಿಯರ್ ಮಾಡಲು ಎಂಜಿನಿಯರ್‌ಗಳ ಮೂಲಕ ಜಿಪಂ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ ಎಂದು ತುಮಕೂರು ಜಿಲ್ಲಾ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಹಿರಿಯ ಕಾಂಗ್ರೆಸ್‌ ಮುಖಂಡ ಎ.ಡಿ.ಬಲರಾಮಯ್ಯ ಆರೋಪಿಸುತ್ತಿದ್ಧಾರೆ.